ಮಡಿಕೇರಿ, ಆ. ೩೧: ಸರ್ಕಾರಿ ಪದವಿಪೂರ್ವ ಕಾಲೇಜು ತಿತಿಮತಿ, ಇಲ್ಲಿನ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಅತಿಥಿಗಳಾಗಿ ತಿತಿಮತಿಯವರಾದ ನೌಕಾಪಡೆಯ ನಿವೃತ್ತ ಕಮಾಂಡರ್ ಚಕ್ಕೇರ ಎಂ. ಬೆಳ್ಳಿಯಪ್ಪ ಇವರು ಆಗಮಿಸಿದ್ದರು. ಇವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಚಾಚಲು ಇಂತಹ ವೇದಿಕೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು. ಮತ್ತೋರ್ವ ಮುಖ್ಯ ಅತಿಥಿ ಬಾಳುಗೋಡು ಏಕಲವ್ಯ ಮಾದರಿ ಪದವಿ ಪೂರ್ವ ವಸತಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿರುವ ಡಾ. ಐ.ಎಂ. ದಿಲನ್ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದ ಮೂಲಕ ತಮ್ಮ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿರುವ ಚಾರ್ಲ್ಸ್ ಡಿಸೋಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೂ, ತಿತಿಮತಿ ಪ್ರಾಥಮಿಕ ಕೃಷಿ ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷರಾದ ಚೆಪ್ಪುಡಿರ ರಾಮಕೃಷ್ಣ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭಕೋರಿದರು. ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆ ವಾರ್ಡಿನ ಸದಸ್ಯರಾದ ಅನೂಪ್, ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮಂಗಳರವರು ಉಪಸ್ಥಿತರಿದ್ದರು.

ಸಿಂಚನ ಮತ್ತು ತಂಡದವರು ಪ್ರಾರ್ಥಿಸಿ, ಸ್ವಾಗತ ಭಾಷಣವನ್ನು ಸೋನಾ ನಿವಿತಾ, ಪ್ರಾಸ್ತಾವಿಕ ನುಡಿಯನ್ನು ರಾಜ್ಯಶಾಸ್ತç ಉಪನ್ಯಾಸಕಿ ರೂಪ, ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾವಿಧಿಯನ್ನು ಯಮುನಾ ಅವರು ನಿರ್ವಹಿಸಿದರು. ರಿಷಿತ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜು ನಾಯಕಿ ವರ್ಷ ನಿರ್ವಹಿಸಿದರು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಡುಗೊರೆ ನೀಡುವುದರ ಮೂಲಕ ಈ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತವನ್ನು ಬಯಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.