ಕುಶಾಲನಗರ/ಗೋಣಿಕೊಪ್ಪ, ಆ. ೩೧: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಒಟ್ಟು ೭ ಆನೆಗಳು ತೆರಳಿವೆ.
ದುಬಾರೆ, ಹಾರಂಗಿ ಹಾಗೂ ಮತ್ತಿಗೋಡು ಸಾಕಾನೆ ಶಿಬಿರಗಳಿಂದ ತೆರಳಿದ ಆನೆಗಳನ್ನು ವೀರನಹೊಸಳ್ಳಿಗೆ ಸಾಗಿಸಿ ನಂತರ ಅಲ್ಲಿಂದ ಗಜಪಯಣದ ಮೂಲಕ ಮೈಸೂರಿಗೆ ರವಾನಿಸಲಾಗುತ್ತಿದೆ.
ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರದಿಂದ ಒಟ್ಟು ನಾಲ್ಕು ಆನೆಗಳನ್ನು ಗುರುವಾರ ಮೈಸೂರಿಗೆ ಕಳುಹಿಸಿಕೊಡಲಾಯಿತು.
ದುಬಾರೆ ಶಿಬಿರದ ಧನಂಜಯ (೪೫) ಗೋಪಿ ( ೪೧) ಕಂಚನ್ (೨೪) ಹಾರಂಗಿ ಶಿಬಿರದಲ್ಲಿದ್ದ ವಿಜಯ (೬೩) ಆನೆಗಳನ್ನು ಲಾರಿ ಮೂಲಕ ಸಾಗಿಸಲಾಯಿತು. ಆನೆಗಳಿಗೆ ಸಿಂಗಾರ ಮಾಡಿ ಬೀಳ್ಕೊಡಲಾಯಿತು. ಆನೆಗಳ ಮಾವುತರಾದ ಭಾಸ್ಕರ, ನವೀನ್ ಕುಮಾರ್, ಬೋಜಪ್ಪ, ವಿಜಯ ಕಾವಾಡಿಗಳಾದ ಮಣಿ, ಶಿವು, ಭರತ್, ಮಣಿಕಂಠ ಮತ್ತು ಸಿಬ್ಬಂದಿಗಳೊAದಿಗೆ ಮೈಸೂರಿಗೆ ಲಾರಿಯಲ್ಲಿ ಆನೆಗಳನ್ನು ರವಾನಿಸಲಾಯಿತು.
ಕಂಚನ್ ಆನೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಆನೆಗಳು ಹಿಂದಿನ ವರ್ಷಗಳಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ದವು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಪ್ರಕಟಣೆ ಯಲ್ಲಿ ಮಾಹಿತಿ ನೀಡಿದ್ದಾರೆ.
ಆನೆಗಳು ಶಿಬಿರದಿಂದ ವೀರನ ಹೊಸಹಳ್ಳಿ ಬಳಿ ಹಮ್ಮಿಕೊಂಡಿರುವ ಗಜಪಯಣ
(ಮೊದಲ ಪುಟದಿಂದ) ಕಾರ್ಯಕ್ರಮಕ್ಕೆ ಹಾಜರಾಗಲಿವೆ. ನಂತರ ಗಜ ಪಯಣ ಮೂಲಕ ಮೈಸೂರಿಗೆ ತೆರಳಲಿದೆ ಎಂದು ತಿಳಿಸಿದ್ದಾರೆ.
*ಗೋಣಿಕೊಪ್ಪ: ವಿಶ್ವ ವಿಖ್ಯಾತ ಮೈಸೂರು ದಸರಾ ಗಜಪಯಣಕ್ಕೆ ನಾಗರಹೊಳೆ ಮತ್ತಿಗೋಡು ಕಂಠಪುರ ಆನೆ ಶಿಬಿರದಿಂದ ಮೂರು ಆನೆಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಮೊದಲ ತಂಡ ೯ ಆನೆಗಳ ಜೊತೆಗೆ ತಿತಿಮತಿ ಮತ್ತಿಗೋಡು ವಿನಿಂದ ಅಂಬಾರಿ ಹೊರುವ ಕ್ಯಾಪ್ಟನ್ ಖ್ಯಾತಿಯ ಅಭಿಮನ್ಯು ಜೊತೆಗೆ ಭೀಮ, ಮಹೇಂದ್ರ, ಮೈಸೂರು ಕಡೆ ಪಯಣ ಬೆಳಸಲಿವೆ.
ನಾಗರಹೊಳೆ ಹೆಬ್ಬಾಗಿಲಲ್ಲಿ ಗಜಪಯಣಕ್ಕೆ ಸಕಲ ಸಿದ್ದತೆ ನಡೆದಿದ್ದು, ವೀರನಹೊಸಹಳ್ಳಿ ಗೇಟ್ ಬಳಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಗಜ ಪಯಣಕ್ಕೆ ಸಂಭ್ರಮದ ವಾತಾವರಣ ನಿರ್ಮಿಸಲಾಗಿದೆ.
ಅಭಿಮನ್ಯು ಜೊತೆಗೆ ಮಾವುತ ವಸಂತ, ಕಾವಡಿ ರಾಜು ಜೆ.ಕೆ, ಮಹೇಂದ್ರ ಜೊತೆಗೆ ಮಾವುತ ರಾಜಣ್ಣ, ಕಾವಡಿ ಮಲ್ಲಿಕಾರ್ಜುನ, ಭೀಮನ ಜೊತೆಗೆ ಮಾವುತ ಗುಂಡು, ಕಾವಡಿ ನಜುಂಡ ಮತ್ತು ಕುಟುಂಬಸ್ಥರು ತೆರಳಲಿದ್ದಾರೆ ಎಂದು ಮತ್ತಿಗೋಡು ವಲಯ ಅರಣ್ಯಾಧಿಕಾರಿ ದಿಲೀಪ್ ಮಾಹಿತಿ ನೀಡಿದ್ದಾರೆ.
ಚಂದ್ರಮೋಹನ್/ಎನ್.ಎನ್.ದಿನೇಶ್