ವೀರಾಜಪೇಟೆ, ಆ. ೨೯: ಹಲವಾರು ರೀತಿಯಲ್ಲಿ ಕಷ್ಟಗಳನ್ನು ಸಹಿಸಿಕೊಂಡು ಕಸವಿಲೇವಾರಿ ಮಾಡಲಾಗುತ್ತದೆ. ಮನೆ ಮತ್ತು ಪರಿಸರ ನಾಶಕ್ಕೆ ಅಸಮರ್ಪಕ ರೀತಿಯ ಕಸ ವಿಗಂಡಣೆಯೇ ಕಾರಣ ಎಂದು ವೀರಾಜಪೇಟೆ ಪುರಸಭೆಯ ಪೌರಕಾರ್ಮಿಕರಾದ ಮಾದೇವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಧೀಕ್ ಆರ್ಟ್ಸ್ ಲಿಂಕ್ ವೀರಾಜಪೇಟೆ ಸಂಸ್ಥೆಯ ವತಿಯಿಂದ ಪುರಸಭೆ ವೀರಾಜಪೇಟೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ವೀರಾಜಪೇಟೆ ನರ್ಸಿಂಗ್ ಹೋಂ ಸಂಸ್ಥೆಗಳ ಪ್ರಾಯೋಜಕತ್ವದೊಂದಿಗೆ ನಗರದ ಚಿಕ್ಕಪೇಟೆ ಜಯಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿ ಕಲಾ ಉತ್ಸವ ಅಂಗವಾಗಿ ಕಸವಿಲೇವಾರಿ ಮತ್ತು ಸ್ವಚ್ಛತೆ ಎಂಬ ವಿಷಯದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮತ್ತು ಪ್ರಬಂಧ ಬರೆಯುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಮಾದೇವಿ ಅವರು ನಾಡಿನ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವುದು ನಮ್ಮ ಕೈಯಲ್ಲಿದೆ. ಶುಚಿತ್ವದ ಬಗ್ಗೆ ಮಾಹಿತಿ ತಿಳಿದಿದ್ದರೂ ಕೆಲವು ಮಂದಿ ಎಲ್ಲೆಂದರಲ್ಲಿ ಕಸವನ್ನು ಹಾಕಿ ತೆರಳುವುದು ಕಾಣಸಿಗುತ್ತದೆ. ಕಸ ವಿಲೇವಾರಿ ಮಾಡುವ ನಾವುಗಳು ಸಹ ಮನುಷ್ಯರೇ... ಕಸ ವಿಲೇವಾರಿ ಮಾಡುವ ಸಂದರ್ಭದಲ್ಲಿ ನೌಕರರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ. ತಮಗಳ ಮನೆಯಲ್ಲೇ ಒಣ ಕಸ ಮತ್ತು ಹಸಿ ಕಸ ಎಂದು ವಿಂಗಡಣೆಗೊಳಿಸಿ ನಿಗದಿತ ಸ್ಥಳದಲ್ಲಿರಿಸಿ, ಬೀದಿ ನಾಯಿಗಳಿಗೆ ಆಹಾರವಾಗಿ ಕೈಚೀಲದಲ್ಲಿರಿಸಬೇಡಿ, ನಮ್ಮ ಮನೆ ನಮ್ಮ ಪರಿಸರ ಎಂದು ಪರಿಕಲ್ಪನೆ ಇದ್ದಲ್ಲಿ ನಾಡು ಸುಂದರವಾಗಿ ಕಾಣಿಸಬಹುದು. ಈ ನಿಟ್ಟಿನಲ್ಲಿ ಪುರಸಭೆಯ ಕಸ ವಿಲೆವಾರಿ ನಿಯಮಗಳನ್ನು ಸರ್ವರೂ ಅನುಸರಿಸಬೇಕು ಎಂದು ಕರೆ ನೀಡಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ವೀರಾಜಪೇಟೆಯ ಉಪನ್ಯಾಸಕಿ ದಮಯಂತಿ ಅವರು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಸರ್ವರು ಮುಂದಾಗಬೇಕು. ನಮ್ಮಲ್ಲಿ ಅಂದರೆ ಮನೆಯಲ್ಲಿ ಉಪಯೋಗಿಸಿ ನಂತರ ಎಸೆಯುವ ಮುನ್ನ ಕಸದಿಂದ ಹಲವು ಉಪಯುಕ್ತವಾದ ವಿಷಯಗಳನ್ನು ತಿಳಿದುಕೊಳ್ಳುವುದು ಸೂಕ್ತ. ಉಪಯೋಗಿಸಿ ಉಳಿದಿರುವ ಆಹಾರ ಪದಾರ್ಥಗಳನ್ನು ಗಿಡಗಳಿಗೆ ಬಳಕೆ ಮಾಡುವುದರಿಂದ ಸಾವಯವ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಗಿಡಗಳ ಬೆಳವಣಿಗೆಯಲ್ಲಿ ಅನುಕೂಲವಾಗುತ್ತದೆ. ಈ ರೀತಿಯ ಪದ್ಧತಿಗಳು ಬೃಹತ್ ನಗರಗಳಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ ಬಟ್ಟೆ ಚೀಲಗಳನ್ನು ಬಳಕೆ ಮಾಡುವುದು ಸೂಕ್ತ. ಕಸ ವಿಲೇವಾರಿ ಮನೆಯಿಂದಲೆ ಜಾರಿಗೆಯಾಗಬೇಕು ಮತ್ತೊಬ್ಬರನ್ನು ಅವಲಂಬಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಯ ಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆಯ ನಿರ್ದೇಶಕರು ಮತ್ತು ವೀರಾಜಪೇಟೆ ನರ್ಸಿಂಗ್ ಹೋಂನ ಮುಖ್ಯಸ್ಥೆ ಡಾ. ಫಾತೀಮಾ ಕಾರ್ಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವೀರಾಜಪೇಟೆ ನಗರದ ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆ, ಜಯ ಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆ, ಅನ್ವರ್‌ಲ್ ಹುದಾ ಆಂಗ್ಲ ಮಾದ್ಯಮ ಶಾಲೆ, ಬ್ರೆöÊಟ್ ಪಬ್ಲಿಕ್ ಶಾಲೆ, ಕಾವೇರಿ ಶಾಲೆ, ಕೂರ್ಗ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆಯ ಸುಮಾರು ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಾಧಿಕ್ ಆರ್ಟ್ಸ್ ಲಿಂಕ್ ಸಂಸ್ಥೆಯ ಸಾಧಿಕ್ ಹಂಸ, ಜಯಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆಯ ಕಾರ್ಯದರ್ಶಿ ತ್ರಿಶು ಗಣಪತಿ, ದಿವ್ಯ ಮುತ್ತಣ್ಣ, ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಕರ್ಣಂಡ ಜಯ, ಕೋಶಾಧಿಕಾರಿ ನಿಯಾಜ್ ಕೆ.ಪಿ., ಜಯ ಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಾಲ್ ಕುಮಾರ್ ಮತ್ತು ಪುರಸಭೆಯ ಸದಸ್ಯರಾದ ಎಂ. ದೇಚಮ್ಮ ಕಾಳಪ್ಪ ಅವರುಗಳು ಉಪಸ್ಥಿತರಿದ್ದರು.
ಜಯ ಪ್ರಕಾಶ್ ನಾರಾಯಣ್ ಸ್ಮಾರಕ ಪ್ರೌಢಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರು, ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.