ಸಿದ್ದಾಪುರ, ಆ. ೩೦: ಸಿದ್ದಾಪುರದ ಮಾರುಕಟ್ಟೆಯ ದುರಸ್ತಿಪಡಿಸಲು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಿದ್ದಾಪುರದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿರುವ ಪ್ರೇಮಾ ಗೋಪಾಲ್ ಅಧ್ಯಕ್ಷತೆಯಲ್ಲಿ ಸಿದ್ದಾಪುರ ಗ್ರಾ.ಪಂ.ಯ ಸಾಮಾನ್ಯಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಹೆಚ್.ಎನ್. ಪಳನಿಸ್ವಾಮಿ, ಸಿದ್ದಾಪುರದ ಸಂತೆ ಮಾರುಕಟ್ಟೆ ಹಳೆ ಮಾರುಕಟ್ಟೆಯಾಗಿದ್ದು, ಅಂಗಡಿ ಮಳಿಗೆಗಳು ದುಸ್ಥಿತಿಯಿಂದ ಕೂಡಿವೆ? ವ್ಯಾಪಾರಸ್ಥರಿಗೆ ಮಳೆಗಾಲ ದಲ್ಲಿ ವ್ಯಾಪಾರ ಮಾಡಲು ಸಮಸ್ಯೆ ಯಾಗಿದೆ ಎಂದು ಪ್ರಸ್ತಾಪಿಸಿದರು.
ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಸಭೆಯಲ್ಲಿ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಭೆ ನಿರ್ಣಯವನ್ನು ಕೈಗೊಂಡಿತ್ತು. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸುವ ನಿಟ್ಟಿನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಬಳಿ ಮನವಿ ಮಾಡಿ ಶಾಶ್ವತ ಜಾಗ ಗುರುತಿಸುವಂತೆ ತೀರ್ಮಾನಿ ಸಲಾಯಿತು.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ರುಗಳು ಹಾಜರಿದ್ದರು.