ಮಡಿಕೇರಿ, ಆ. ೩೦: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ವತಿಯಿಂದ ಮಡಿಕೇರಿ ಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜಾ ರವರ ಹೆಸರಿನಲ್ಲಿ ಸ್ಥಾಪಿತವಾಗಿರುವ ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕತೆ ರಚನಾ ವಿಧಾನದ ಕುರಿತು ಉಪನ್ಯಾಸವು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಇಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕರಾದ ಪುಟ್ಟರಾಜು ನೆರವೇರಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಕಥೆ ಬರೆಯಲು ವೇದಿಕೆ ಹಾಗೂ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿ ಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮುಂದೆ ಉತ್ತಮ ಕಥೆಗಾರರು ಸಾಹಿತಿಗಳು ಆಗ ಬೇಕೆಂದು ಕಿವಿಮಾತು ಹೇಳಿದರು.
ಕತೆ ರಚನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬರಹಗಾರ್ತಿ ಸುನೀತಾ ಕುಶಾಲನಗರ ಅವರು ಮಾತನಾಡಿ ಕಥೆ ಬರೆಯಬೇಕೆಂದರೆ ಮೊದಲು ಮೂಲ ಹಾಗೂ ಅನುವಾ ದಿತ ಕಥೆಗಳನ್ನು ಓದಿಕೊಳ್ಳಬೇಕು. ಕಥೆ ಅನುಕರಣೆಯಾಗಬೇಕೆಂದಿಲ್ಲ ಮನಸ್ಸಿಗೆ ಮೂಡಿದ ವಿಷಯಗಳ ಕುರಿತು ಕಥೆ ಬರೆಯಬಹುದು. ಲೋಕ ಸಾಹಿತ್ಯದ ಕುರಿತು ತಿಳಿದು ಕೊಂಡರೆ ಕಥೆ ಬರೆಯಲು ಅನುಕೂ ಲವಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಥೆ ಎಂದಿಗೂ ದೊಡ್ಡ ದಾಗಿರದೆ ಸಣ್ಣ ಕಥೆಗಳನ್ನು ಬರೆದರೆ ಆ ಬರಹ ಹೆಚ್ಚಿನ ಜನರನ್ನು ತಲುಪು ತ್ತದೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿದ್ದ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ, ಅವರು ಮಾತನಾಡಿ ಕಥೆ ಬರೆಯಬೇಕೆಂದರೆ ಕಥೆಯನ್ನು ಓದುವ ಹಾಗೂ ಕೇಳುವ ಮನಸ್ಸಿರಬೇಕು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್ ಅವರು ಮಾತನಾಡಿ ಕಥೆಯನ್ನು ಬರೆಯುವಾಗ ಜನಪದ ಭಾಷೆಯನ್ನು ಬಳಸಿಕೊಂಡರೆ ಜನರ ಮನಸನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮದ್ ಅವರು ಮಾತನಾಡಿ ವಿದ್ಯಾರ್ಥಿಗಳು ಅವರ ಇಚ್ಛೆಯಂತೆ ಕಲಿತು ಬರೆಯುವ ಕಥೆಗಿಂತ ವಿಷಯ ಆಧಾರಿತ ಕಥೆಯನ್ನು ಬರೆಯಬೇಕು ಎನ್ನುವ ಉದ್ದೇಶದಿಂದ ಪರಿಷತ್ತು ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯಗಳನ್ನು ನೀಡುತ್ತಿದೆ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಭಾವನೆಗಳನ್ನು ಕೇಂದ್ರೀಕರಿಸಿ ಜನರ ಮನ ಮುಟ್ಟುವಂತೆ ಕಥೆ ಬರೆಯಲು ಸಾಧ್ಯವಾಗಲಿ ಎಂದು ಶುಭ ಹಾರೈಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಸ್ವಾಗತಿಸಿ ರಿಷಿತ್ ಮಾದಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಪೋಷಕರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ೧೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.