ಸೋಮವಾರಪೇಟೆ, ಆ.೨೯: ಸಮೀಪದ ತಣ್ಣೀರುಹಳ್ಳ ಗ್ರಾಮದ ಮೂಲಕ ವಳಗುಂದ ಸಂಪರ್ಕಿಸುವ ರಸ್ತೆಯ ಬದಿಯಲ್ಲಿರುವ ವಳಗುಂದದ ಕಾಫಿ ತೋಟದೊಳಗೆ ಅಕ್ರಮವಾಗಿ ನಡೆಯುತ್ತಿದ್ದ ಅಂದರ್ ಬಾಹರ್ ಆಟದ ಅಡ್ಡೆಯ ಮೇಲೆ ಪೊಲೀಸರು ಧಾಳಿ ನಡೆಸಿದ್ದು, ಈ ಸಂದರ್ಭ ಜೂಜುಕೋರರೆಲ್ಲರೂ ಪರಾರಿ ಯಾಗಿದ್ದಾರೆ.

ಪೊಲೀಸ್ ಧಾಳಿಯ ಸಂದರ್ಭ ಸ್ಥಳದಲ್ಲಿ ಎರಡು ಕಾರುಗಳು ಮತ್ತು ಒಂದು ಬೈಕ್ ನಿಲ್ಲಿಸಲಾಗಿದ್ದು, ಮೂರೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಣ್ಣೀರುಹಳ್ಳದಿಂದ ವಳಗುಂದ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ, ಅಷ್ಟಾಗಿ ನಿರ್ವಹಣೆ ಇಲ್ಲದ ಕಾಫಿ ತೋಟವೇ ಜೂಜುಕೋರರ ಇಸ್ಪೀಟ್ ಅಡ್ಡೆಯಾಗಿದ್ದು, ದಿನಂಪ್ರತಿ ಇಲ್ಲಿ ಸಾವಿರಾರು ರೂಪಾಯಿಗಳ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ.

ಜೂಜುಕೋರರು ದಿನಂಪ್ರತಿ ಇಲ್ಲಿಗೆ ಆಗಮಿಸಿ ಬೆಳಿಗ್ಗೆಯಿಂದ ಸಂಜೆಯವರೆಗೂ ಇಸ್ಪೀಟ್ ಆಡುತ್ತಿದ್ದು, ಜೂಜಾಟ ನಡೆಸುತ್ತಿದ್ದವ ‘ಪಿಡಿ ಚಾರ್ಜ್' ಪಡೆದು ರಾಜಾರೋಷವಾಗಿ ಅಡ್ಡೆ ನಡೆಸುತ್ತಿದ್ದ ಎನ್ನಲಾಗಿದೆ.

ಪೊಲೀಸರು ಅಡ್ಡೆಗೆ ಪ್ರವೇಶಿಸುತ್ತಿದ್ದಂತೆಯೇ ಇಸ್ಪೀಟ್ ಆಡುತ್ತಿದ್ದವರು ಎದ್ದೆನೋ ಬಿದ್ದೆನೋ ಎಂದು ಕಾಡು ತುಂಬಿರುವ ಕಾಫಿ ತೋಟದೊಳಗೆ ಪರಾರಿಯಾಗಿದ್ದಾರೆ.

ಪರಿಣಾಮ ಪೊಲೀಸರು ಸ್ಥಳದಲ್ಲಿದ್ದ ಹೋಂಡ ಅಮೇಜ್ ಕಾರು, ಒಂದು ಮಾರುತಿ ಓಮ್ನಿ, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಠಾಣೆಯ ಎದುರು ನಿಲ್ಲಿಸಿದ್ದಾರೆ. ವಾಹನಗಳ ಮಾಲೀಕರನ್ನು ಪತ್ತೆ ಮಾಡಿದ ನಂತರವಷ್ಟೇ ಮೊಕದ್ದಮೆ ದಾಖಲಿಸುವ ಸಾಧ್ಯತೆಯಿದೆ.