ಚೆಯ್ಯಂಡಾಣೆ, ಆ. ೨೯: ಪ್ರಸಿದ್ಧ ಜಲಪಾತ ಚೇಲಾವರ (ಕಬ್ಬೆ)ದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಬೇಲಿ ಹಾಗೂ ಎಚ್ಚರಿಕೆಯ ನಾಮ ಫಲಕವನ್ನು ತೆರವುಗೊಳಿಸಿ ಜಲಪಾತಕ್ಕೆ ಪ್ರವೇಶಿಸಿ ಕಿಡಿಗೇಡಿತನ ಮೆರೆಯಲು ಪ್ರಯತ್ನಿಸಿದ ಯುವ ಕರಿಗೆ ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿ ಬೇಲಿಯನ್ನು ಅವರಿಂದಲೇ ದುರಸ್ತಿ ಪಡಿಸಿದ ಘಟನೆ ನಡೆದಿದೆ.

ಪ್ರವಾಸಕ್ಕೆ ಆಗಮಿಸಿದ್ದ ೮ ಜನ ಯುವಕರ ತಂಡ ಜಲಪಾತದ ಹತ್ತಿರ ಹೋಗಲು ನಿರ್ಬಂಧ ವಿಧಿಸಲಾಗಿದ್ದರೂ ಇದನ್ನು ಉಲ್ಲಂಘಿಸಿ ಬೇಲಿ ಹಾಗೂ ನಾಮಫಲಕ ಕಿತ್ತು ಮುನ್ನುಗ್ಗಲು ಪ್ರಯತ್ನಿಸಿದ್ದಾರೆ. ಇದು ಸ್ಥಳೀಯರಿಗೆ ತಿಳಿದು ಪಂಚಾಯಿತಿಯವರು ಆಗಮಿಸಿ ಪ್ರವಾಸಿಗರಿಂದಲೇ ದುರಸ್ತಿ ಪಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸಂಬAಧಪಟ್ಟ ಇಲಾಖೆ ಶಾಶ್ವತ ರೈಲ್ವೆ ಕಂಬಿ ಅಳವಡಿಸಿ ಮುಂದಕ್ಕೆ ತೆರಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಸದಸ್ಯರಾದ ಈರಪ್ಪ, ಮಂಜುಳ, ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ಸಿಬ್ಬಂದಿ ಸಚಿನ್ ಇದ್ದರು.