ವೀರಾಜಪೇಟೆ, ಆ. ೨೯: ಕೇರಳ ರಾಜ್ಯದಿಂದ ಮಾಕುಟ್ಟ ಹಾಗೂ ಕರಿಕೆ ಚೆಕ್ಪೋಸ್ಟ್ ಮೂಲಕ ಜಿಲ್ಲೆಗೆ ಸಾಗಾಟವಾಗುತ್ತಿದ್ದ ಕೆಂಪು ಇಟ್ಟಿಗೆ ನಿಷೇಧವನ್ನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಹಿಂಪಡೆದಿದ್ದು, ಸರ್ಕಾರದ ಕಾನೂನಿನ ಅನ್ವಯ ಸರಬರಾಜು ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಬರುತ್ತಿದ್ದ ಕೆಂಪು ಇಟ್ಟಿಗೆಗಳ ವ್ಯವಹಾರದಲ್ಲಿ ಅಧಿಕಾರಿಗಳು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಭ್ರಷ್ಟಾಚಾರ ನಡೆಸುತ್ತಿದ್ದ ಕಾರಣ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಅನೇಕ ಮನೆ ಹಾಗೂ ಕಟ್ಟಡಗಳ ಕಾಮಗಾರಿ ಸ್ಥಗಿತಗೊಂಡಿತ್ತು. ಇದನ್ನು ಮನಗಂಡು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಕೇರಳ ರಾಜ್ಯದಿಂದ ಬರುವಂತ ಕೆಂಪು ಇಟ್ಟಿಗೆಗಳನ್ನು ಜಿ.ಎಸ್.ಟಿ ಹಾಗೂ ತೂಕದ ರಶೀದಿಯ ಮೂಲಕ ವ್ಯವಹಾರ ನಡೆಸಬಹುದಾಗಿದೆ. ವ್ಯವಹಾರವನ್ನು ತಾ.೩೦ರಿಂದಲೇ ಪ್ರಾರಂಭಿಸಬಹುದು ಎಂದರು.
ಜಮ್ಮಾಬಾಣೆಗೆ ಕಂದಾಯ ನಿಗದಿ ವಿಚಾರದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ೭೫ ರಿಂದ ೧ ಲಕ್ಷ ಎಕರೆ ಬಾಣೆ ಜಾಗಕ್ಕೆ ಕಂದಾಯ ನಿಗದಿಗೆ ಬಾಕಿ ಇದೆ. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ‘ಪೈಲೇಟ್ ಪ್ರಾಜೆಕ್ಟ್’ ಅಡಿಯಲ್ಲಿ ಜಿಲ್ಲೆಯ ಐದು ತಾಲೂಕುಗಳ ಐದು ಗ್ರಾಮಗಳಾದ ಮಡಿಕೇರಿ ತಾಲೂಕಿನ ಬೇಂಗೂರು ಗ್ರಾಮದಲ್ಲಿ ೭೧೨ ಎಕರೆ, ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ೧೯೬ ಎಕರೆ, ಕುಶಾಲನಗರ ತಾಲೂಕಿನ ನಾಕೂರು ಶಿರಂಗಳ್ಳಿ ಗ್ರಾಮದಲ್ಲಿ ೪೬೧ ಎಕರೆ, ವೀರಾಜಪೇಟೆ ತಾಲೂಕಿನ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಮ್ಮತ್ತಿ ಹೋಬಳಿಯ ಅಮ್ಮತ್ತಿ ಗ್ರಾಮದಲ್ಲಿ ೨೩೦ ಎಕರೆ, ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ೨೨೩ ಎಕರೆ ಜಾಗವನ್ನು ಆರಂಭದಲ್ಲಿ ತೆಗೆದುಕೊಳ್ಳಲಾಗುವುದು. ಇದರ ಸಾಧಕ ಬಾಧಕಗಳನ್ನು ನೋಡಿ ಉಳಿದ ಗ್ರಾಮಗಳನ್ನು ತೆಗೆದು ಕೊಳ್ಳಲಾಗುವುದು. ಈ ಎಲ್ಲಾ ಜಾಗಗಳ ಸರ್ವೆ ಕಾರ್ಯವನ್ನು ಸರ್ಕಾರಿ ಸರ್ವೆಯರ್ಗಳೇ ನಡೆಸಬೇಕಾಗಿರುವುದರಿಂದ ವಾರದ ಮೂರು ದಿನಗಳಲ್ಲಿ ಕಚೇರಿಯಲ್ಲಿ ಸರ್ವೆಯರ್ಗಳು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಕಂದಾಯ ಇಲಾಖೆಯಲ್ಲಿ ಜಾಗಗಳ ಕಂದಾಯ ನಿಗದಿ ಆಗದ ಕಾರಣ ಜಾಗ ವಿಭಜನೆ ಆಗದೆ ೬೪,೫೦೦ ಸರ್ವೆ ಸಂಖ್ಯೆಯ ಎದರು “ಪಿ” ನಂಬರ್ ಬರುತ್ತಿದೆ. ಒಂಟಿ ಆರ್.ಟಿ.ಸಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಾಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಹೇಳಿದರು.
ಈಗಾಗಲೇ ಶ್ರೀಮಂಗಲ, ಸಿದ್ದಾಪುರ, ಹುದಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ೬೬ ಕೆವಿ ಸಬ್ಸ್ಟೇಷನ್ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಭಾಗಮಂಡಲ ಸೇರಿದಂತೆ ಉಳಿದ ಭಾಗಗಳಲ್ಲಿ ಎರಡನೆ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದರಿಂದ ಬಹುತೇಕ ವಿದ್ಯುತ್ ಸಮಸ್ಯೆಗಳನ್ನು ನೀಗಿಸಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿಶು, ದಿಲ್ಲು ಮತ್ತಿತರರು ಉಪಸ್ಥಿತರಿದ್ದರು.