ಗೋಣಿಕೊಪ್ಪ ವರದಿ, ಆ. ೨೮ : ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮೈದಾನದಲ್ಲಿ ಮೂರು ದಿನ ಆಯೋಜಿಸಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಫುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ, ಮೂಡಬಿದಿರೆ ತೋಟಗಾರಿಕೆ, ಹಿರಿಯೂರು ತೋಟಗಾರಿಕೆ, ಶಿವಮೊಗ್ಗ ಕೃಷಿ, ಇರುವಕ್ಕಿ ಕ್ಯಾಂಪಸ್ ಮಹಾ ವಿದ್ಯಾಲಯದ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.
ಶಿವಮೊಗ್ಗ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥ ಡಾ. ಎನ್. ಶಿವಶಂಕರ್ ಗಿಡಕ್ಕೆ ನೀರೆರೆದು ಚಾಲನೆ ನೀಡಿ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದ ಮಹಾ ವಿದ್ಯಾಲಯಗಳಲ್ಲಿ ಗುಣಮಟ್ಟದ ಕ್ರೀಡೆಗೆ ಒತ್ತು ನೀಡಲಾಗುತ್ತಿದೆ. ಉತ್ತಮ ದೈಹಿಕ ಶಿಕ್ಷಣದಿಂದ ಕ್ರೀಡಾ ಫಲಿತಾಂಶ ಪಡೆಯಲು ಶ್ರಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಆಹಾರ, ತರಬೇತಿ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಕ್ರೀಡೆ ಕೂಡ ಶಿಕ್ಷಣದ ಭಾಗ ಎಂಬ ಅರಿವು ಮೂಡಿಸಲಾಗುತ್ತಿದೆ ಎಂದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಭಾಕರ್ ಮಾತನಾಡಿ, ದೇಶ ವೈವಿಧ್ಯತೆಯಿಂದ ಕೂಡಿದ್ದು, ಕ್ರೀಡೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯ ಮೂಲವಾಗಿದೆ. ಎಲ್ಲರೊಂದಿಗೆ ಬೆರೆತು ಜ್ಞಾನ ಶಕ್ತಿ ವೃದ್ಧಿಸಿಕೊಳ್ಳಲು ಕೀಡೆ ಮುಖ್ಯ ಎಂದರು.
ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ, ನೈಸರ್ಗಿಕ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಡಾ. ಭಾಗಿರತಿ, ದೈಹಿಕ ಶಿಕ್ಷಣ ನಿರ್ದೇಶಕ ಈಶ್ವರ್ ಇದ್ದರು.