ಮಡಿಕೇರಿ ಆ. ೨೮ : ದೈವಾರಾಧ ನೆಯಲ್ಲಿ ಲೋಪವಾಗದಂತೆ ಎಲ್ಲರೂ ಎಚ್ಚರ ವಹಿಸಬೇಕು ಮತ್ತು ದೈವಗಳ ಭಾವಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅಭಿಪ್ರಾಯ ಗಳನ್ನು ಹರಿಯ ಬಿಡಬಾರದು ಎಂದು ಪ್ರಸಿದ್ಧ ದೈವ ನರ್ತಕ ಸುಳ್ಯದ ಬೊಳಿಮಜಲಿನ ಜಯರಾಮ್ ತಿಳಿಸಿದರು. ಮಡಿಕೇರಿಯ ಬಾಲ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೈವಾರಾಧನೆಯು ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ನಡೆಯುತ್ತದೆ. ತುಳುನಾಡಿನಲ್ಲಿ ದೈವ ನರ್ತನ ಎರಡೂವರೆ ಗಂಟೆ ನಡೆದರೆ ಕೊಡಗಿನಲ್ಲಿ ಪ್ರಶ್ನೆ ಚಿಂತನೆಯ ಕ್ರಮ ಸೇರಿ ರಾತ್ರಿ ಪೂರ್ತಿ ನಡೆಯುತ್ತದೆ. ಸಂಪ್ರದಾಯಕ್ಕೆ ಲೋಪವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದರು. ಸಂಘದ ಹಿರಿಯ ಸಲಹೆಗಾರ ಕೆ.ಕೆ. ದೇವಪ್ಪ ಮಾತನಾಡಿ, ತುಳುನಾಡು, ಕೊಡಗು ಸೇರಿದಂತೆ ಅನೇಕ ಭಾಗಗಳಲ್ಲಿ ದೈವಾರಾಧನೆ ನಡೆಯುತ್ತಿದ್ದು, ಧಾರ್ಮಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಪ್ರತಿವರ್ಷ ನಡೆಯುವ ದೈವಾರಾಧನೆ ಯಾವುದೇ ಕಾರಣಕ್ಕು ನಿಲ್ಲಬಾರದು. ನೇಮೋತ್ಸವ ನಡೆಯದೇ ಇರುವ ಕಡೆ ಮತ್ತೆ ಮುಂದುವರಿಸುವ ಕುರಿತು ಅರಿವು ಮೂಡಿಸಬೇಕು ಮತ್ತು ಸಂಘದಿAದ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸದಾಶಿವ ರೈ ಸಂಘವು ನೋಂದಾವಣೆಗೊAಡಿದ್ದು, ಜಿಲ್ಲೆಯ ಎಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರು ಸದಸ್ಯತ್ವ ಪಡೆದುಕೊಳ್ಳಬೇಕು. ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಸಂಘಟನಾ ಕಾರ್ಯದರ್ಶಿ ರಮೇಶ್, ಜಿಲ್ಲಾ ಖಜಾಂಚಿ ಜನಾರ್ಧನ್, ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗದ ಸದಸ್ಯರು ಉಪಸ್ಥಿತರಿದ್ದರು.