(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಆ. ೨೭: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಾನವನ ಮೇಲೆ ಕಾಡಾನೆಯ ದಾಳಿಯು ನಿರಂತರವಾಗಿ ನಡೆಯುತ್ತಿದೆ. ಅಮಾಯಕ ಜೀವಗಳು ಕಾಡಾನೆಯ ದಾಳಿಗೆ ಬಲಿಯಾಗುತ್ತಿವೆ. ನಿರಂತರ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸಲು, ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಇಲಾಖೆ ಹಾಗೂ ಸರ್ಕಾರ ಎಡವುತ್ತಿದೆ. ಶಾಶ್ವತ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಒಂದು ವಾರದ ಅಂತರದಲ್ಲಿ ೩ ಜೀವಗಳು ಕಾಡಾನೆಯ ದಾಳಿಗೆ ಬಲಿಯಾಗಿವೆ.
ಅರೆಕಾಡು ನಿವಾಸಿ ದೇವಪ್ಪ ಎಂಬವರನ್ನು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಮಟ್ಟಂ ನಿವಾಸಿ ಆಯಿಷಾ(೬೫) ಎಂಬ ಮಹಿಳೆಯನ್ನು ಹಾಗೂ ಆಡಿನಾಡೂರಿನ ಈರಪ್ಪ ಅವರನ್ನು ಕಾಡಾನೆಯು ದಾಳಿ ನಡೆಸಿ ಕೊಂದು ಹಾಕಿದೆ. ಅರೆಕಾಡು ನಿವಾಸಿ ದೇವಪ್ಪ ತನ್ನ ದೈನಂದಿನ ಕೆಲಸ ಮುಗಿಸಿ ಟ್ರಾö್ಯಕ್ಟರ್ನಲ್ಲಿ ಸಂಜೆಯ ವೇಳೆ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿಯೇ ಟ್ರಾö್ಯಕ್ಟರ್ನ ಮೇಲೆ ದಾಳಿ ನಡೆಸಿದ ಕಾಡಾನೆ ದೇವಪ್ಪ ಅವರನ್ನು ಬಲಿ ತೆಗೆದುಕೊಂಡಿದೆ.
ಈ ಪ್ರಕರಣ ಮಾಸುವ ಮುನ್ನವೇ ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಮಟ್ಟಂ ನಿವಾಸಿ ಆಯಿಷಾ ಎಂಬ ಮಹಿಳೆಯು ಮುಂಜಾನೆ ತನ್ನ ಮನೆಯಿಂದ ಅನತಿ ದೂರದಿಂದ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದ ವೇಳೆ ಸಮೀಪದ ಕಾಫಿ ತೋಟದಿಂದ ಎದುರಾದ ಕಾಡಾನೆಯು ಮಹಿಳೆಯ ಮೇಲೆ ದಾಳಿ ನಡೆಸಿ ಧಾರುಣವಾಗಿ ಕೊಂದು ಹಾಕಿದೆ. ಆಡಿನಾಡೂರಿನಲ್ಲಿ ತಮ್ಮ ಹಸುವನ್ನು ಹುಡುಕುತ್ತಾ ತೆರಳಿದ ಈರಪ್ಪ ಅವರ ಮೇಲೆಯೂ ಆನೆ ದಾಳಿ ನಡೆಸಿ ಕೊಂಡು ಹಾಕಿದೆ. ಇದರ ಮಧ್ಯೆಯೇ ಅಮ್ಮತ್ತಿ ಹೋಬಳಿಯ ಕಣ್ಣಂಗಾಲ ಗ್ರಾಮ ಪಂಚಾಯಿತಿ ಮುಂದೆ ನಡೆದುಕೊಂಡು ಬರುತ್ತಿದ್ದ ಕಾರ್ಮಿಕನ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಕಾರ್ಮಿಕ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿ ದ್ದರು. ನಂತರ
ಇಂಜಿಲಗೇರಿ
ಹಾಗೂ ಕಕ್ಕಬ್ಬೆಯಲ್ಲಿಯೂ ಕಾಡಾನೆಯಿಂದ ದಾಳಿ ನಡೆದಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಆನೆ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾನವನ ಜೀವಕ್ಕೆ ಹಾನಿ ಮಾಡುತ್ತಿರುವ ಕಾಡಾನೆಯು ರೈತರ ಹಾಗೂ ಬೆಳೆಗಾರರ ಹಾಗೂ ಭತ್ತ ಬೆಳೆಯುವ ರೈತರ ಗದ್ದೆಗಳ ಮೇಲೆ ಹಿಂಡು ಹಿಂಡಾಗಿ ಧಾಳಿ ಮಾಡುತ್ತಿರುವುದರಿಂದ ರೈತ ಹಾಗೂ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸುತ್ತಿದೆ. ಕಳೆದ ೨೦ ವರ್ಷ ವರ್ಷಗಳಿಂದ ಕೊಡಗಿನ ಪ್ರಮುಖವಾಗಿ ದ.ಕೊಡಗು ಹಾಗೂ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶ ಕಾಫಿ ತೋಟದಲ್ಲಿ ಕಾಡಾನೆಗಳು ನೆಲೆ ನಿಂತಿವೆ. ತನ್ನ ಸಂತಾನವೃದ್ಧಿಯನ್ನು ಕಾಫಿ ತೋಟದಲ್ಲಿಯೇ ಮಾಡಿಕೊಳ್ಳುತ್ತಿವೆ, ಕಾಡಾನೆಯ ನಿಯಂತ್ರಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಚಟುವಟಿಕೆಗಳು ಕಂಡು ಬರುತ್ತಿಲ್ಲ. ಪರಿಸರ, ಕಾನೂನು, ನಿಯಮ, ಪ್ರಾಣಿ ರಕ್ಷಣೆ ಕಾಯಿದೆ ಹೀಗೆ ಹತ್ತು ಹಲವು ಕಾರಣಗಳೂ ಸರ್ಕಾರವನ್ನು ಇಕ್ಕಟ್ಟಿಗೆ ಸೇರಿಸುತ್ತಿವೆ. ಇದರಿಂದ ಸಹಜವಾಗಿಯೇ ನಾಗರಿಕರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ಹಾಗೂ ಆಸಮಾಧಾನಗಳು ಸ್ಫೋಟ ಗೊಳ್ಳುತ್ತಿವೆ. ಕಾಡಾನೆ ದಾಳಿ ವೇಳೆ ನಾಗರಿಕರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದಾರೆ.
ಕಾಡಾನೆಯ ನಿಯಂತ್ರಣಕ್ಕೆ ಸರ್ಕಾರವು ಕೋಟ್ಯಂತರ ಹಣವನ್ನು ಬಿಡುಗಡೆಗೊಳಿಸುತ್ತಿದ್ದರೂ ಸಮ ರ್ಪಕವಾಗಿ ಯೋಜನೆಯು ಅನು ಷ್ಠಾನಗೊಳ್ಳುತ್ತಿಲ್ಲ. ನಿಧಾನಗತಿಯ ಕಾಮಗಾರಿಗಳು, ಆಗಿಂದಾಗಿಯೇ ಅಧಿಕಾರಿಗಳ ವರ್ಗಾವಣೆ, ಇಚ್ಚಾಶಕ್ತಿ ಇಲ್ಲದ ಅಧಿಕಾರಿಗಳ ನೇಮಕಾತಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದೆ ಇರುವುದು ಕಾಡಾನೆಯ ಉಪಟಳಕ್ಕೆ ಮೂಲ ಕಾರಣವಾಗುತ್ತಿವೆ.
ಕಾಡಾನೆಗಳ ನಿಯಂತ್ರಣಕ್ಕೆ ಈ ಹಿಂದೆ ತೋಡಿರುವ ಆನೆ ಕಂದಕಗಳು, ಸೋಲಾರ್ ಬೇಲಿಗಳು, ನಿರ್ವಹಣೆ ಇಲ್ಲದಿರುವುದು ಕಾಡಾನೆಗಳು ನಾಡಿನತ್ತ ಆಗಮಿಸಲು ಕಾರಣವಾಗುತ್ತಿವೆ. ಬಹುತೇಕ ಭಾಗದಲ್ಲಿ ನಿರ್ಮಿಸಿರುವ ಕಾಡಾನೆಗಳ ಕಂದಕ ಮಣ್ಣು ತುಂಬಿ ಹೋಗಿವೆ. ಹಲವೆಡೆ ಸೋಲಾರ್ ಬೇಲಿಗಳು ಹಾಳಾಗಿವೆ. ಇವುಗಳ ಬ್ಯಾಟರಿಗಳು ತುಕ್ಕು ಹಿಡಿದಿವೆ. ಇಂತಹ ಕಾಮ ಗಾರಿಗಳಿಗೆ ಇಲಾಖೆ ವತಿಯಿಂದ ಕೋಟ್ಯಂ ತರ ಹಣವು ಖರ್ಚು ಮಾಡಲಾಗಿದೆ. ಆರಂಭದಲ್ಲಿ ಮಾಡುವ ಕೆಲಸದ ಬಗ್ಗೆ ಇರುವ ಆಸಕ್ತಿ ನಂತರದ ವರ್ಷಗಳಲ್ಲಿ ಇದರ ನಿರ್ವಹಣೆಗೆ ಮಾಡುತ್ತಿಲ್ಲ ಇದರಿಂದಾಗಿ ಸಮಸ್ಯೆಗಳು ಕಠಿಣ ವಾಗುತ್ತಲೆ ಸಾಗುತ್ತಿವೆ.