ಈಶ್ವರ ಖಂಡ್ರೆ
ಮಡಿಕೇರಿ, ಆ. ೨೬: ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ, ಇದನ್ನು ತಿರಸ್ಕರಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಅದಾಗ್ಯೂ ಕೇಂದ್ರ ಸರ್ಕಾರ ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿದ್ದು, ಈ ಸಮಿತಿಗೆ ರಾಜ್ಯದ ಪಶ್ಚಿಮಘಟ್ಟದ ಎಲ್ಲ ಬಾಧ್ಯಸ್ಥರನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ನಗರದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಇತ್ತೀಚೆಗೆ ಸಂಜಯ್ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದಾಗ ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಮೊದಲಾದ ಪಶ್ಚಿಮಘಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನವಸತಿಯಲ್ಲಿರುವ ನಿವಾಸಿಗಳೊಂದಿಗೆ ಸಮಾಲೋಚಿಸಿ ನಂತರ ವರದಿ ಸಿದ್ಧಪಡಿಸಬೇಕು ಎಂದು ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪರಿಸರ ಉಳಿಯಬೇಕು. ಈ ಕಾರ್ಯವನ್ನು ಪಶ್ಚಿಮಘಟ್ಟದ ಜನರು ಮಾಡುತ್ತಿದ್ದಾರೆ. ಅದಗ್ಯೂ ಕೇಂದ್ರ ಸರ್ಕಾರ ಪಶ್ಚಿಮಘಟ್ಟ ಉಳಿಸಲು ಈ ಸಮಿತಿ ರಚಿಸಿದೆ. ಕಸ್ತೂರಿ ರಂಗನ್ ವರದಿ ೧೦ ವರ್ಷ ಹಳೆಯದಾಗಿದ್ದರೆ, ಗಾಡ್ಗೀಳ್ ವರದಿ ಅದಕ್ಕಿಂತ ಹಳೆಯದು. ಪ್ರಸಕ್ತ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ವರದಿಯಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸರ್ಕಾರದ ನಿಲುವಾಗಿದೆ. ಎಲ್ಲರೂ ಒಪ್ಪುವಂತಹ ವರದಿ ಬಂದರೆ ಶಾಸಕರೊಂದಿಗೆ, ಬಾಧ್ಯಸ್ಥರೊಂದಿಗೆ ಮತ್ತು ಸಚಿವ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಿ ಅಂತಿಮವಾಗಿ ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.