ಕುಶಾಲನಗರ, ಆ. ೨೬: ಕುಶಾಲನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ವ್ಯಕ್ತಿಯೋರ್ವ ಬೈಕ್ ಡಿಕ್ಕಿಪಡಿಸಿದ ಘಟನೆ ನಡೆದಿದೆ. ಇಲ್ಲಿನ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಸಂಚಾರಿ ಠಾಣಾಧಿಕಾರಿಗಳ ನೇತೃತ್ವದಲ್ಲಿ ಕೊಪ್ಪ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಕುಶಾಲನಗರ ದಂಡಿನಪೇಟೆಯ ನಿವಾಸಿ ರಿಜ್ವಾನ್ ಎಂಬಾತ ವೇಗವಾಗಿ ಕುಶಾಲನಗರದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಈ ಸಂದರ್ಭ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಶಶಿಕುಮಾರ್ಗೆ ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದಾರೆ. ಕಾಲು-ತಲೆ ಭಾಗಕ್ಕೆ ಪೆಟ್ಟಾಗಿದ್ದು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರನ ಕಣ್ಣು ಕೈಗೆ ಗಾಯವಾಗಿದ್ದು, ಆತ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.