ಮುಳ್ಳೂರು, ಆ. ೨೬: ಸಮೀಪದ ಆಲೂರು-ಸಿದ್ದಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಲೀಲಕುಮಾರ್ ಸಂಘದ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭ ಅವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ವಲಯದಲ್ಲಿ ಒಂದಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗ್ರಾಮೀಣ ಸಹಕಾರಿ ಸದಸ್ಯರಿಗೆ ವಿವಿಧ ರೀತಿಯ ಸಾಲ, ಸೌಲಭ್ಯಗಳನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸರಕಾರ ಮತ್ತು ಸಹಕಾರ ಇಲಾಖೆ ೨೦೨೩-೨೪ನೇ ಸಾಲಿಗೆ ಅನ್ವಯವಾಗುವಂತೆ ‘ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘ’ ಎಂಬ ಹೆಸರಿಗೆ ಬದಲಾಯಿಸಿದೆ.

ಸಹಕಾರ ಸಂಘದ ನಿಯಮದ ಪ್ರಕಾರವೇ ಸಂಘವು ಎಂದಿನAತೆ ಕಾರ್ಯನಿರ್ವಹಿಸುತ್ತದೆ ಎಂದರು. ಈ ಕುರಿತು ಹಿರಿಯ ಸಹಕಾರಿಗಳಾದ ಸಿ.ಕೆ. ಚಂದ್ರಶೇಖರ್, ಎಂ.ಎನ್. ಮಹಾಂತಪ್ಪ ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ಸಹಕಾರಿ ಸದಸ್ಯರು ರೈತರಿಗೆ ಸಂಘವು ಸಕಾಲಕ್ಕೆ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರವನ್ನು ಪೂರೈಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಂಘದ ಅಧ್ಯಕ್ಷ ನಮ್ಮ ಸಂಘವು ಸಕಾಲಕ್ಕೆ ಸರಿಯಾಗಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸುತ್ತಿದೆ. ಆದರೆ ಯೂರಿಯಾ ಗೊಬ್ಬರ ಮಾತ್ರ ಸಕಾಲದಲ್ಲಿ ನಮ್ಮ ಸಂಘಕ್ಕೆ ಪೂರೈಕೆಯಾಗುತ್ತಿಲ್ಲವಷ್ಟೆ ಎಂದು ಸಮಜಾಯಿಷಿಕೆ ನೀಡಿದರು. ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಿಯಾಗಿ ಮಳೆಯಾಗದೆ ಶೇ. ೮೦ ರಷ್ಟು ರೈತರು ಇನ್ನೂ ನಾಟಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ವ್ಯಾಪ್ತಿಯನ್ನು ಬರಗಾಲ ಪ್ರದೇಶ ಎಂದು ಸದರಿ ಸಂಘದ ಮೂಲಕ ಸರಕಾರಕ್ಕೆ ಮನವಿ ನೀಡಬೇಕೆ ಎಂದು ಸಹಕಾರಿ ಮುತ್ತಪ್ಪ ಒತ್ತಾಯಿಸಿದರು. ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. ಸಂಘದ ಪ್ರಗತಿ, ಇತರೆ ವಿಷಯಗಳ ಕುರಿತು ಸಹಕಾರಿಗಳಾದ ಹೆಚ್.ಎಸ್. ಪ್ರೇಮ್‌ನಾಥ್, ಮೋಹನ್ ಮುಂತಾದವರು ಚರ್ಚಿಸಿದರು. ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ ಸಂಘದ ಲಾಭಾಂಶದಲ್ಲಿ ಡಿವಿಡೆಂಡ್ ಫಂಡ್ ಅನ್ನು ಶೇ. ೯ರಂತೆ ವಿತರಿಸುವಂತೆ ತೀರ್ಮಾನಿಸಲಾಯಿತು.

ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಮಾತನಾಡಿ, ಸಂಘದಲ್ಲಿ ೨೮೭೭ ಮಂದಿ ಸದಸ್ಯರಿದ್ದು ಸಂಘವು ರೂ. ೨೪ ಲಕ್ಷ ೭೦ ಸಾವಿರ ೩೪೯ ನಿವ್ವಳ ಲಾಭಗಳಿಸಿದ್ದು, ೨೦೨೨-೨೩ನೇ ಸಾಲಿಗೆ ಸಂಘವು ರೂ.೧೦,೭೪,೧೩,೨೧ ಕೆಸಿಸಿ ಸಾಲ ವಿತರಿಸಿದೆ. ರೂ. ೪೭,೩೬,೪೦೦ ಆಭರಣ ಸಾಲ, ರೂ.೨೩,೨೬,೮೧೫ ಗೊಬ್ಬರ ಸಾಲ, ಸ್ವ-ಸಹಾಯ ಗುಂಪುಗಳಿಗೆ ಸಾಲ ಹೀಗೆ ಒಟ್ಟು ರೂ. ೧೪,೪೮,೨೨,೬೨೨ ಸಾಲ ನೀಡಿದೆ ಎಂದರು. ಸಹಕಾರಿ ಸದಸ್ಯರು ಸಂಘದಲ್ಲಿ ಮಾಡಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಘದ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಎಸ್. ವೀಣಾ, ನಿರ್ದೇಶಕರಾದ ಸುಂದರೇಶ್, ಸಿ.ಕೆ. ದೇವಯ್ಯ, ಎ.ಜಿ. ವಿಜಯ್, ಪಿ.ಕೆ. ಭರತ್‌ಕುಮಾರ್, ಎಂ.ಸಿ. ಕಾವೇರಪ್ಪ, ಟಿ.ಪಿ. ವಿಜಯ್, ಯಶೋಧ, ಜಾಹ್ನವಿ, ಧರ್ಮಪ್ಪ, ಮಲ್ಲೇಶ್, ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್, ಕೆಡಿಸಿಸಿ ಮೇಲ್ವಿಚಾರಕ ಶಶಿಕುಮಾರ್, ಸಂಘದ ಲೆಕ್ಕಾಧಿಕಾರಿ ಕೆ.ಡಿ. ಚಂದ್ರಮತಿ, ಸಿಬ್ಬಂದಿ ಪ್ರವೀಣ್ ಮುಂತಾದವರು ಇದ್ದರು.