ಚೆಟ್ಟಳ್ಳಿ, ಆ. ೨೭: ಕೊಡಗಿನ ಮುಖ್ಯ ಹಬ್ಬವಾದ ಕೈಲ್‌ಪೊಳ್ದ್ ಆಚರಣೆಯನ್ನು ತಾ. ೨೯ರ ಮಂಗಳವಾರ ನಾಲ್ಕು ನಾಡಿನಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.

ಪಾಡಿಇಗ್ಗುತಪ್ಪ ನೆಲೆಯಲ್ಲಿ ತಕ್ಕಮುಖ್ಯಸ್ಥರ ಸಮುಖ ದಲ್ಲಿ ಅಮ್ಮಂಗೇರಿ ಅರ್ಚಕರು ಜ್ಯೋತಿಷ್ಯ ನೋಡಿ ಈ ಬಾರಿ ನಾಲ್ಕುನಾಡಿನಲ್ಲಿ ತಾ. ೨೯ರಂದು ಸಂಜೆ ೫ ಗಂಟೆ ೧೫ ನಿಮಿಷಕ್ಕೆ ಮಕರ ಲಗ್ನದಲ್ಲಿ ಆಯುಧ ಪೂಜೆ ಆಚರಿಸುವ ಬಗ್ಗೆ ತಿಳಿಸಲಾಗಿತ್ತು.

ತಾ. ೨೯ರಂದು ನಾಲ್ಕುನಾಡಿನ ಕುಟುಂಬಸ್ಥರೆಲ್ಲ ಆಯಾಯ ಐನ್ ಮನೆಯಲ್ಲಿ ಸೇರಿ ದೇವನೆಲೆಯಾದ ನೆಲ್ಲಕ್ಕಿ ನಡುಬಾಡೆಯಲ್ಲಿ ಆಯುಧಗಳನ್ನೆಲ್ಲ ಇಟ್ಟು ಪೂಜೆ ಸಲ್ಲಿಸಿ ತೆಂಗಿನಕಾಯಿಗೆ ಗುಂಡು ಹೊಡೆವರು. ಹಬ್ಬದ ವಿಶೇಷ ಭೋಜನವನ್ನು ಮೀದಿ ಇಟ್ಟು ಸವಿವರು.

ಕಳೆದ ವಾರ ಸೂರ್ಲಬ್ಬಿ ನಾಡಿನಲ್ಲಿ ಕೈಲ್‌ಪೊಳ್ದ್ ಆಚರಣೆ ಸಂಪ್ರದಾಯಬದ್ಧವಾಗಿ ನಡೆಯಿತು. ನಂತರದಲ್ಲಿ ಈ ನಾಲ್ಕುನಾಡಿನಲ್ಲಿ ಕೈಲ್ ಪೊಳ್ದ್ ಆಚರಣೆಯಾದರೆ ಸೆಪ್ಟೆಂಬರ್ ೩ರಂದು ಕೊಡಗಿನ ಬಹುತೇಕ ಕಡೆ ಕೈಲ್‌ಪೊಳ್ದ್ ಹಬ್ಬದ ಆಚರಣೆ ನಡೆಯಲಿದೆ.

ಹಬ್ಬದ ಅಂಗವಾಗಿ ನಾಪೋಕ್ಲು ಭಗವತಿ ಯುವಕ ಸಂಘದ ವತಿಯಿಂದ ಹಲವು ವರ್ಷಗಳಿಂದ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ವರ್ಷ ತಾ.೨೯ರಂದು ನಾಪೋಕ್ಲು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪುರುಷ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಬಗೆಯ ಕ್ರೀಡೆಯನ್ನು ಆಯೋಜಿಸಲಾಗಿದೆ. ನಂತರದಲ್ಲಿ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ ನಡೆಯಲಿದೆ.