ಸಿದ್ದಾಪುರ, ಆ. ೨೭: ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನಲ್ಲಿ ಮಹಿಳೆಯನ್ನು ಬಲಿಪಡೆದ ಸಲಗವನ್ನು ಸೆರೆಹಿಡಿಯಲು ಅರಣ್ಯ ಸಚಿವರು ಆದೇಶ ನೀಡಿದ್ದಾರೆ ಎಂದು ವೀರಾಜಪೇಟೆ ಡಿಸಿಎಫ್ ಶರಣಬಸಪ್ಪ ತಿಳಿಸಿದ್ದಾರೆ.

ತಾ. ೨೧ರಂದು ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನ ನಿವಾಸಿಯಾಗಿರುವ ಆಯಿಷಾ ಎಂಬ ವೃದ್ಧೆ ಮಹಿಳೆ ಮನೆಯ ಸಮೀಪದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭ ಕಾಫಿ ತೋಟದೊಳಗಿನಿಂದ ಬಂದ ಸಲಗವು ಮಹಿಳೆಯ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಇದಾದ ನಂತರ ಸಲಗವು ಆ ಭಾಗದಲ್ಲಿ ಓಡಾಡುತ್ತಾ ಮಾನವನನ್ನು ಕಂಡ ಕೂಡಲೇ ಬೆನ್ನಟ್ಟುತ್ತ ದಾಳಿ ನಡೆಸಲು ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಸಚಿವರು ಹಾಗೂ ಶಾಸಕ ಪೊನ್ನಣ್ಣ ಅವರೊಂದಿಗೆ ಮಾತನಾಡಿ, ಸಲಗವನ್ನು ಸೆರೆಹಿಡಿಯಲು ಒತ್ತಾಯಿಸಿದ್ದರು. ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಾನವರನ್ನು ಹತ್ಯೆ ಮಾಡಿರುವ ಸಲಗವನ್ನು ಸೆರೆ ಹಿಡಿಯಲು ಆದೇಶ ನೀಡಿದ್ದು, ಇದೀಗ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸಲಗವನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅದರ ಚಲನವಲನ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದು, ಕಾರ್ಯಾಚರಣೆ ನಡೆಸಿ ಸಲಗವನ್ನು ಖೆಡ್ಡಾಕ್ಕೆ ಬೀಳಿಸಲು ಸಿದ್ಧತೆ ಕೈಗೊಂಡಿರುವುದಾಗಿ ಶರಣ ಬಸಪ್ಪ ಮಾಹಿತಿ ನೀಡಿದ್ದಾರೆ.

ಸಾಕಾನೆಗಳ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳ ಗುಂಪಿನಲ್ಲಿರುವ ಕಾಡಾನೆಯೊಂದನ್ನು ಗುರುತಿಸಿ ತಕ್ಷಣವೇ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗುವುದು. ಅನುಮತಿ ಸಿಕ್ಕಿದ ಕೂಡಲೇ ಈ ಕಾರ್ಯವನ್ನು ಮುಂದುವರಿಸಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ. ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆ ಗಳನ್ನು ಕಾಡಿಗೆ ಅಟ್ಟಲು ಹಾಗೂ ಸಲಗವೊಂದನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಮೂರು ತಂಡಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು. -ವಾಸು