*ಗೋಣಿಕೊಪ್ಪ, ಆ. ೨೭: ಒಂದೇ ಧರ್ಮ, ಒಂದೇ ದೇವರು, ಒಂದೇ ಜಾತಿ ಎಂಬ ತತ್ವವನ್ನು ಸಾರಿದ ನಾರಾಯಣ ಗುರುಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಈ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಮಾನತೆ ಮತ್ತು ಮನುಜ ಪ್ರೀತಿಯಿಂದ ಬದುಕಲು ಸಾಧ್ಯವಾ ಗಬಲ್ಲದು ಎಂದು ಕೊಡಗು ಜಿಲ್ಲಾದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಸಂತ ನಾರಾಯಣ ಗುರುಗಳ ೧೬೯ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದ.ಸಂ.ಸ. ರಾಜ್ಯ ಸಮಿತಿ ಸದಸ್ಯ ಟಿ.ಎನ್. ಗೋವಿಂದಪ್ಪ ಮಾತನಾಡಿ, ಸಮಾಜ ಸುಧಾರಣೆಗೆ ಕ್ರಾಂತಿ ಮಾಡಿದ ಮಹಾ ಮಾನವತಾವಾದಿ ನಾರಾಯಣ ಗುರುಗಳ ಆದರ್ಶ ಬದುಕು ಪ್ರತಿಯೊಬ್ಬರ ಜೀವನದ ಹಾದಿಯಾಗಬೇಕು ಎಂದು ಹೇಳಿದರು. ಜಾತಿ, ಧರ್ಮ ಮತಗಳಾಚೆಗೆ ಮನುಜ ಪ್ರೇಮವನ್ನು ಉಳಿಸಿಕೊಂಡಾಗ ಸಮಾಜ ನೆಮ್ಮದಿ ಕಾಣಬಲ್ಲದು ಎಂದು ತಿಳಿಸಿದರು.

ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಬುದ್ಧಿಜೀವಿಗಳು ಎಂದು ಕರೆಯುವ ಕೇರಳ ರಾಜ್ಯದಲ್ಲಿಯೂ ಜಾತಿ ಭೇದಗಳ ಅನಿಷ್ಠ ಪದ್ಧತಿಯಿಂದ ಬಳಲುತ್ತಿತ್ತು. ಇಂತಹ ಪಿಡುಗನ್ನು ತೊಡೆದು ಹಾಕಲು ನಾರಾಯಣ ಗುರುಗಳ ಜೀವಿತಾವಧಿಯ ಸೇವೆ ಅಮೂಲ್ಯವಾದದ್ದು ಎಂದರು.

ಸುಭಿಕ್ಷೆಯ ಸಮಾಜ ನಿರ್ಮಿಸಲು ನಾರಾಯಣ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಗೋಣಿಕೊಪ್ಪ ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ಜಲೀಲ್ ನಾರಾಯಣ ಗುರುಗಳ ಬಗ್ಗೆ ಮಾತನಾಡಿದರು.

ಸವಿತ ಸಮಾಜದ ಅಧ್ಯಕ್ಷ ಗಣೇಶ್, ಸಮಾಜಸೇವಕ ಉದಯ್, ಸಂಘಟನಾ ಸಂಚಾಲಕ ಸಿಂಗಿ ಸತೀಶ್, ಸಾಂಸ್ಕೃತಿಕ ಸಂಘಟನೆ ಸಂಚಾಲಕ ಗಿರೀಶ್, ಜಿಲ್ಲಾ ಸಂಘಟನಾ ಸಂಚಾಲಕ ರಾಜೇಶ್, ತಾಲೂಕು ಸಮಿತಿ ಸಂಘಟನಾ ಸಂಚಾಲಕ ನಾಗೇಂದ್ರ, ಮಂಜು, ಗ್ರಾಮ ಸಂಚಾಲಕ ಚೆಲುವ, ಇಲಿಯಾಸ್, ರಘು, ಸುಬ್ಬಯ್ಯ, ನೌಶಾದ್, ನೂರ್ ಬಾಷಾ, ಪದಾಧಿಕಾರಿಗಳು ಸದಸ್ಯರುಗಳು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.