ಶನಿವಾರಸಂತೆ, ಆ. ೨೭: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ನೂತನ ಅಧ್ಯಕ್ಷೆ ಸತ್ಯಾವತಿ ಅವರ ಪ್ರಥಮ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಆರಂಭದಿAದ ಕೊನೆಯವರೆಗೂ ಗದ್ದಲ-ಗೊಂದಲ, ಆರೋಪ-ಪ್ರತ್ಯಾರೋಪಗಳಿಂದಲೇ ಸಭೆ ನಡೆಯಿತು.

ಸದಸ್ಯ ಡಿ.ಪಿ.ಭೋಜಪ್ಪ ಹಾಗೂ ಇತರ ಸದಸ್ಯರು ಹಿಂದಿನ ಅಧ್ಯಕ್ಷೆ ಪೂರ್ಣಿಮಾ ಅವರ ವಿರುದ್ಧ ಏಕಪಕ್ಷೀಯ ನಿರ್ಧಾರ ಸೇರಿದಂತೆ ಹಲವು ಆರೋಪಗಳನ್ನು ಮಾಡಿದರು.

ಪ್ರತಿಕ್ರಿಯಿಸಿದ ಪೂರ್ಣಿಮಾ, ನನ್ನ ಕಾರ್ಯಾವಧಿಯಲ್ಲಿ ಲೋಪವಾಗಿದ್ದರೇ ತನಿಖೆಯಾಗಲಿ. ನೀಡುವ ಯಾವ ಶಿಕ್ಷೆಗೂ ಬದ್ಧಳಾಗುತ್ತೇನೆ. ವೈಯಕ್ತಿಕ ದ್ವೇಷದಿಂದ ಸುಮ್ಮನೆ ಆರೋಪಿಸುವುದು ಸರಿಯಲ್ಲ. ಸರ್ವ ಸದಸ್ಯರ ತೀರ್ಮಾನ ಪಡೆದೇ ಚರ್ಚಿತ ವಿಷಯವನ್ನು ಠರಾವು ಪುಸ್ತಕದಲ್ಲಿ ಬರೆಯಲಾಗಿದೆ. ನಾನು ಏಕಪಕ್ಷೀಯ ನಿರ್ಧಾರವನ್ನು ಎಂದಿಗೂ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸದಸ್ಯ ದೇವರಾಜ್ ಮಾತನಾಡಿ, ಈ ಹಿಂದೆ ಸಿದ್ಧಪಡಿಸಿದ ಯೋಜನಾ ವರದಿ ರದ್ದುಪಡಿಸಿ, ನೂತನ ಅಧ್ಯಕ್ಷರ ಸಮಕ್ಷಮದಲ್ಲಿ ಹೊಸ ಯೋಜನಾ ವರದಿ ರೂಪಿಸಬೇಕು. ಕಿರುಬಿಳಹಾ ಮತ್ತು ಚೆನ್ನಾಪುರ ಕೆರೆ ದುರಸ್ತಿ ಕಾಮಗಾರಿ ವಾರ್ಡ್ ಸದಸ್ಯರ ಗಮನಕ್ಕೆ ತಂದಿಲ್ಲ. ಸೋಲಾರ್ ದೀಪವನ್ನು ನಿರ್ದಿಷ್ಟ ಜಾಗದಲ್ಲಿ ಅಳವಡಿಸಿಲ್ಲ. ಇವುಗಳ ಕಾಮಗಾರಿ ವೆಚ್ಚದ ವರದಿಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಎಂಜಿನಿಯರ್ ಕಾರ್ತಿಕ್ ಮಾತನಾಡಿ, ಅಮೃತ ಸರೋವರ ಯೋಜನೆಯಂತೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾಮಗಾರಿ ನಡೆಸಲಾಗಿದೆ. ನರೇಗಾ ಯೋಜನೆಯಡಿ ಮಾಡಿರುವ ಕಾಮಗಾರಿಯಲ್ಲಿ ವಾರ್ಡ್ ಸದಸ್ಯರಿಗೆ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.

ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಸದಸ್ಯರಾದ ಡಿ.ಪಿ.ಬೋಜಪ್ಪ ಹಾಗೂ ಸಿ.ಜೆ. ಗಿರೀಶ್ ಅವರು ಹಿಂದೆ ಮಾಡಿದ್ದ ಭ್ರಷ್ಟಾಚಾರ ಆರೋಪವೂ ಚರ್ಚಿಸಿಲ್ಪಟ್ಟಿತು. ಪ್ರತಿಕ್ರಿಯಿಸಿದ ಸದಸ್ಯ ನಿತಿನ್ ಈ ಕುರಿತು ತನಿಖೆಯಾಗಲಿ. ನಂತರವಷ್ಟೇ ಸತ್ಯಾಸತ್ಯತೆ ಹೊರಬೀಳಲಿದೆ. ಬಾಕಿ ಇರುವ ಬಿಲ್ ಅನ್ನು ನೂತನ ಅಧ್ಯಕ್ಷರು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಅಧ್ಯಕ್ಷೆ ಸತ್ಯಾವತಿ ಮಾತನಾಡಿ, ಪಂಚಾಯಿತಿಗೆ ಬರಬೇಕಾದ ತೆರಿಗೆ ವಸೂಲಾತಿಯನ್ನು ಶೀಘ್ರ ಮಾಡಬೇಕು. ಬಾಕಿ ಬಿಲ್ ವಸೂಲಾತಿಗೆ ಸದಸ್ಯರ ಸಹಕಾರ ಅಗತ್ಯ. ಸುಮ್ಮನೆ ವಾದ ಮಾಡಿ ಸಭೆಯ ಸಮಯ ವ್ಯರ್ಥ ಮಾಡಬೇಡಿ. ವೈಯಕ್ತಿಕ ದ್ವೇಷ ಮರೆತು ಆಗಬೇಕಾಗಿರುವ ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿ ಎಂದರು.

ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಮನು ಮಹಾಂತೇಶ್, ಜಾನಕಿ, ಭವಾನಿ, ಪಿಡಿಓ ರಾಜೇಂದ್ರ ಉಪಸ್ಥಿತರಿದ್ದರು.