ಮಡಿಕೇರಿ, ಆ. ೨೭: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವರ್ಷಂಪ್ರತಿ ಮಳೆಯ ಪ್ರಮಾಣದಲ್ಲಿ ಏರು-ಪೇರಾಗುತ್ತಿರುವುದು ಕಂಡುಬರುತ್ತಿದೆ. ಒಂದು ವರ್ಷ ಭಾರೀ ಮಳೆಯಾದರೆ ಮತ್ತೊಂದು ವರ್ಷ ಈ ಪ್ರಮಾಣ ಇಳಿಮುಖ ವಾಗುತ್ತಿದೆ. ಈ ಹಿಂದೆ ಸಾಧಾರಣ ವಾಗಿ ಎಲ್ಲಾ ವರ್ಷಗಳಲ್ಲೂ ಬಹುತೇಕ ಒಂದೇ ಪ್ರಮಾಣದಂತೆ ಸಹಜ ಮಳೆಗಾಲ ಕೊಡಗಿನಲ್ಲಿ ಸಾಮಾನ್ಯ ವಾಗಿತ್ತು. ಆದರೆ ಪ್ರಸ್ತುತದ ಈ ಬದಲಾವಣೆಯಿಂದಾಗಿ ಎಲ್ಲವೂ ಬುಡಮೇಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಗೊಳ್ಳುತ್ತಿದೆ. ಕಾಫಿ ಸೇರಿದಂತೆ ಕೃಷಿ ಪ್ರಧಾನವಾಗಿರುವ ಈ ಜಿಲ್ಲೆಯಲ್ಲಿ ಇದು ವ್ಯತಿರಿಕ್ತ ಪರಿಣಾಮವನ್ನು ಕೃಷಿ ಫಸಲುಗಳ ಮೇಲೆ ಬೀರುತ್ತಿರುವುದು ಒಂದೆಡೆ ಯಾದರೆ, ಕುಡಿಯುವ ನೀರಿನ ವಿಚಾರದಲ್ಲೂ ಸಮಸ್ಯೆ ಉದ್ಭವಿಸುತ್ತಿದೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ೨೦೨೧ರಲ್ಲಿ ಜಿಲ್ಲೆ ಎದುರಿಸಿದ್ದ ಮಳೆಗಾಲಕ್ಕೂ ೨೦೨೨ರಲ್ಲಿನ ಮಳೆಗಾಲಕ್ಕೂ ಭಾರೀ ವ್ಯತ್ಯಾಸವಿದೆ. ೨೦೨೩ರಲ್ಲಿ ಇದು ಮತ್ತೊಂದು ಬದಲಾವಣೆಯ ಹಾದಿಯಲ್ಲಿದೆ. ಸತತ ವರ್ಷಗಳಲ್ಲಿ ಉಂಟಾಗುತ್ತಿರುವ ಈ ಏರು-ಪೇರು ಕೊಡಗಿನ ಸಾಧಾರಣವಾದ ಚಿತ್ರಣವನ್ನು ಬದಲಾಯಿಸುತ್ತಿದೆ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸು ವಂತಾಗಿದೆ.
೨೦೨೧ರಲ್ಲಿ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ ತಲಕಾವೇರಿಗೆ ಜನವರಿಯಿಂದ ಈ ತನಕದ ಅವಧಿಯಲ್ಲಿ ಒಟ್ಟು ೧೬೩ ಇಂಚು ಹಾಗೂ ಭಾಗಮಂಡಲಕ್ಕೆ ೧೬೧ ಇಂಚು ಮಳೆಯಾಗಿತ್ತು. ಇದೇ ೨೦೨೨ರಲ್ಲಿ ಅಂದರೆ ಕಳೆದ ವರ್ಷ ಈ ಅವಧಿಯಲ್ಲಿ ಮಳೆಯ ಪ್ರಮಾಣ ತಲಕಾವೇರಿಗೆ ೨೧೨ ಇಂಚುಗಳಾಗಿದ್ದರೆ ಭಾಗಮಂಡಲಕ್ಕೆ ೨೦೬ ಇಂಚುಗಳಷ್ಟಾಗಿತ್ತು. ಆದರೆ ಪ್ರಸಕ್ತ ವರ್ಷ ಈತನಕ ತಲಕಾವೇರಿಗೆ ೧೧೩ ಹಾಗೂ ಭಾಗಮಂಡಲಕ್ಕೆ ಕೇವಲ ೧೦೪ ಇಂಚು ಮಾತ್ರವಾಗಿದೆ ಎಂಬುದು ಗಮನಾರ್ಹವಾಗಿದೆ.
ಜಿಲ್ಲೆಯ ಸರಾಸರಿ ಮಳೆಗೆ ಹೋಲಿಸಿದರೂ ಮೂರು ವರ್ಷಗಳಲ್ಲಿ ಬದಲಾವಣೆ ಕಂಡುಬರುತ್ತದೆ. ೨೦೨೧ರಲ್ಲಿ ಈ ಅವಧಿಯಲ್ಲಿ ೮೦.೧೭ ಇಂಚು ಮಳೆಯಾಗಿದ್ದರೆ ೨೦೨೨ರಲ್ಲಿ ೧೦೯.೭೬ ಇಂಚು ಸರಾಸರಿ ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ ೬೬.೬೧ ಇಂಚು ಮಾತ್ರ ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲೂ ಇದೆ ಪರಿಸ್ಥಿತಿ ಇದೆ. ಈ ತಾಲೂಕಿನಲ್ಲಿ ೨೦೨೧ರಲ್ಲಿ ೧೧೧.೮೧ ಇಂಚು, ೨೦೨೨ರಲ್ಲಿ ೧೫೮.೨೫ ಇಂಚು ಹಾಗೂ ಪ್ರಸಕ್ತ ವರ್ಷ ೯೮.೨೨ ಇಂಚು ಮಳೆ ಬಿದ್ದಿದೆ.
ಇನ್ನು ವೀರಾಜಪೇಟೆ ತಾಲೂಕಿ ನದ್ದೂ ಇದೇ ಕತೆಯಾಗಿದೆ. ಇಲ್ಲಿ ೨೦೨೧ರಲ್ಲಿ ೬೪.೫೬ ಇಂಚು, ೨೦೨೨ರಲ್ಲಿ ೮೨.೮೮ ಇಂಚು ಹಾಗೂ ಈ ಬಾರಿ ಕೇವಲ ೪೮.೪೫ ಇಂಚು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿ ನದ್ದೂ ಇದೇ ಪರಿಸ್ಥಿತಿ ಯಾಗಿದೆ. ಈ ತಾಲೂಕಿನಲ್ಲಿ ೨೦೨೧ರಲ್ಲಿ ೬೪.೧೩ ಇಂಚು ಮಳೆಯಾಗಿದ್ದರೆ, ೨೦೨೨ರಲ್ಲಿ ಈ ಅವಧಿಯಲ್ಲಿ ೮೮.೧೫ ಇಂಚು ಮಳೆಯಾಗಿತ್ತು. ಆದರೆ ಪ್ರಸಕ್ತ ವರ್ಷ ೫೩.೧೬ ಇಂಚು ಮಾತ್ರ ಮಳೆಯಾಗಿದೆ.
ವರ್ಷಂಪ್ರತಿ ಕೊಡಗಿನ ಮಳೆಗಾಲದಲ್ಲಿ ಆಗುತ್ತಿರುವ ಈ ಬದಲಾವಣೆಯಿಂದಾಗಿ ಭೌಗೋಳಿಕ ವಾಗಿಯೂ ವಿಭಿನ್ನವಾಗಿರುವ ಈ ಜಿಲ್ಲೆಯ ವಾಸ್ತವ ಚಿತ್ರಣಕ್ಕೆ ಧಕ್ಕೆಯಾಗುತ್ತಿರುವುದು ಮಾತ್ರ ನಿಜವಾಗಿದೆ.
-ಕಾಯಪಂಡ ಶಶಿ ಸೋಮಯ್ಯ