ಪೊನ್ನಂಪೇಟೆ, ಆ. ೨೭: ಪೋಷಕರು ಮತ್ತು ಅಧ್ಯಾಪಕರು ಮಕ್ಕಳ ನಡುವೆ ತಾರತಮ್ಯ ಮಾಡಬಾರದು. ಎಲ್ಲ ಮಕ್ಕಳ ಗ್ರಹಿಕಾ ಶಕ್ತಿ ಒಂದೇ ತೆರನಾಗಿರುವುದಿಲ್ಲ. ಕೆಲವು ಮಕ್ಕಳು ಬೇಗ ಗ್ರಹಿಸುತ್ತಾರೆ. ಮತ್ತೆ ಕೆಲವರು ನಿಧಾನವಾಗಿ ಗ್ರಹಿಸಿಕೊಳ್ಳುತ್ತಾರೆ. ಆದ್ದರಿಂದ ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರಿಗೆ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಜೆ.ಸೋಮಣ್ಣ ಹೇಳಿದರು.

ಗೋಣಿಕೊಪ್ಪಲು ಸೇಂಟ್ ಥಾಮಸ್ ಶಾಲೆಯ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಮೂಡಿಸಬೇಕಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಪಠ್ಯ ಪುಸ್ತಕದ ಜತೆಗೆ ಇತರ ಉತ್ತಮ ಪುಸ್ತಕಗಳನ್ನು ನೀಡಿ ಓದುವ ಅಭ್ಯಾಸ ಬೆಳೆಸಬೇಕು. ಈ ಕೆಲಸವನ್ನು ಶಾಲೆಯಲ್ಲಿಯೂ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾದರ್ ಆಂಟನಿ ಮಾತನಾಡಿ, ಮಕ್ಕಳು ಸುಸಂಸ್ಕೃತ ವಾಗಿ ಬೆಳೆಯಲು ಮನೆಯಲ್ಲಿನ ಕೌಟುಂಬಿಕ ಪರಿಸರ ಉತ್ತಮವಾಗಿರ ಬೇಕು. ಮನೆಯಲ್ಲಿ ತಂದೆ ತಾಯಂದಿರು ಅನೊನ್ಯವಾಗಿದ್ದರೆ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ. ಪುಟ್ಟ ಮಕ್ಕಳು ಅನುಕರಣಾಪ್ರಿಯರಾದ್ದರಿಂದ ಹಿರಿಯರ ರೀತಿ ನೀತಿಗಳನ್ನೇ ಅನುಸರಿಸುತ್ತಾರೆ. ಮಕ್ಕಳ ಮುಂದೆ ಹಿರಿಯರು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿರುವುದು ಇಂದು ಅತಿ ಮುಖ್ಯ ಎಂದು ಹೇಳಿದರು. ವಿದ್ಯಾಸಂಸ್ಥೆಯ ಅಭಿವೃದ್ಧಿ ಸಮಿತಿ ಸದಸ್ಯ ವಿಲ್ಸನ್ ಮಾತನಾಡಿ, ಹದಿಹರೆಯದ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳ ಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಆಗಾಗ್ಗೆ ಶಾಲೆಗೆ ಬಂದು ವಿಚಾರಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು. ಪೋಷಕರಾದ ಸಬಿತಾ, ಸ್ಪಂದನಾ ಅನಿಸಿಕೆ ವ್ಯಕ್ತಪಡಿಸಿದರು. ಫಾದರ್ ಥಾಮಚಾನ್, ಫಾದರ್ ವರ್ಗೀಸ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪಿ.ಕೆ. ಪ್ರವೀಣ್, ಪ್ರಭಾವತಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.