ಗೋಣಿಕೊಪ್ಪಲು, ಆ. ೨೭: ದ.ಕೊಡಗಿನ ಕೋತೂರು ಗ್ರಾಮದ ಗಣೇಶ್ (ಗಿಣಿ) ಎಂಬವರಿಗೆ ಸೇರಿದ ಕರುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಮನೆಯ ಸಮೀಪವಿರುವ ಕೆರೆಯ ಬಳಿಯಲ್ಲಿ ಕರುವನ್ನು ಮೇಯಿಸುತ್ತಿದ್ದ ಕಾರ್ಮಿಕನ ಅನತಿ ದೂರದಲ್ಲಿ ಈ ಘಟನೆ ನಡೆದಿದೆ.
ಕಾರ್ಮಿಕ ಕೂಡಲೇ ಮನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾನೆ. ಹುಲಿಯನ್ನು ಅತ್ಯಂತ ಸಮೀಪದಿಂದ ಕಂಡಿರುವುದಾಗಿ ತಿಳಿಸಿದ್ದಾನೆ.
ಸುದ್ದಿ ತಿಳಿದ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಹಿತಿ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಶಾಸಕ ಪೊನ್ನಣ್ಣ ಅವರ ನಿರ್ದೇಶನದ ಮೇರೆ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದರು.
ದೂರವಾಣಿ ಮೂಲಕ ಮಾತನಾಡಿದ ಶಾಸಕ ಪೊನ್ನಣ್ಣ ಹುಲಿ ಸೆರೆಗೆ ಬೋನ್ ಅಳವಡಿಸಲು ಹಾಗೂ ಕರುವನ್ನು ಕಳೆದುಕೊಂಡ ಮಾಲೀಕರಿಗೆ ಕೂಡಲೇ ಪರಿಹಾರ ವಿತರಿಸಲು ಅರಣ್ಯ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಅಧಿಕಾರಿ ಗಣೇಶ್, ಹುಲಿಯ ಸಂಚಾರ ಪತ್ತೆ ಹಚ್ಚಲು ಕ್ಯಾಮರಾ ಅಳವಡಿಸಲಾಗಿದೆ. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಿಬ್ಬಂದಿಗಳು ರಾತ್ರಿ ಪಾಳಿಯದಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಗ್ರಾಮಸ್ಥರಾದ ಸುರೇಶ್, ಮಂಜುನಾಥ, ಧನು ಇತರರು ಹಾಜರಿದ್ದರು.