ಸಿದ್ದಾಪುರ, ಆ. ೨೭: ಕಳೆದ ಎರಡು ವಾರಗಳ ಹಿಂದೆ ಅರೆಕಾಡು ಬಳಿ ದೇವಪ್ಪ ಎಂಬವರನ್ನು ಬಲಿಪಡೆದಿದ್ದ ಸಲಗವನ್ನು ಪತ್ತೆ ಹಚ್ಚಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟೆಮಾಡು ಗ್ರಾಮದ ಚೆರಿಯಪರಂಬು ನಿವಾಸಿಯಾಗಿರುವ ದೇವಪ್ಪ ಎಂಬವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವರ ಬಳಿ ಈ ಸಲಗವನ್ನು ಹಿಡಿದು ಸ್ಥಳಾಂತರ ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದರು. ಸಲಗವನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಮಡಿಕೇರಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರು ಗುರುತಿಸಿರುವ ಸಲಗವನ್ನು ಸೆರೆಹಿಡಿಯಲು ಅದರ ಚಲನವಲನ ಕಂಡುಹಿಡಿಯಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅರೆಕಾಡು, ಹೊಸ್ಕೇರಿ, ಕಟ್ಟೆಮಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಒಂಟಿ ಸಲಗದ ಸುಳಿವು ಪತ್ತೆ ಆಗಿಲ್ಲ. ಭಾನುವಾರದಂದು ಅರೆಕಾಡು ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಮಡಿಕೇರಿ ವಿಭಾಗದ ವನಪಾಲಕ ಮಲ್ಲಯ್ಯ ನೇತೃತ್ವದಲ್ಲಿ ಸಿಬ್ಬಂದಿ ಒಂಟಿ ಸಲಗಕ್ಕಾಗಿ ಹುಡುಕಾಟ ನಡೆಸಿದರು.
೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಿದ್ರಿಸುತ್ತಿದ್ದ ಸಲಗ!
ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಒಂದು ಒಂಟಿ ಸಲಗವು ಅರೆಕಾಡು ಗ್ರಾಮದ ಕುಕ್ಕೇರ ಅಯ್ಯಪ್ಪ ಎಂಬವರ ಕಾಫಿ ತೋಟದೊಳಗೆ ನಿದ್ರಿಸುತ್ತಿದ್ದುದು ಕಂಡುಬAದಿದೆ. ಉಳಿದ ಎರಡು ಸಲಗಗಳು ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದವು ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿ ತಿಳಿಸಿದ್ದಾರೆ. ಈ ಕಾಡಾನೆಗಳನ್ನು ಕಾಫಿ ತೋಟದಿಂದ ನದಿ ದಾಟಿಸಿ ಸಮೀಪದ ಅರಣ್ಯಕ್ಕೆ ಅಟ್ಟಲಾಯಿತು. ಆದರೆ, ಸೆರೆಹಿಡಿಯಲು ಗುರುತಿಸಿದ ಒಂಟಿ ಸಲಗಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.-ವಾಸು.