ಮಡಿಕೇರಿ, ಆ. ೨೬: ಅರಣ್ಯ, ಪ್ರಕೃತಿ, ಪರಿಸರ ಉಳಿಯಬೇಕು. ಜೊತೆಗೆ ಜೀವನ, ಜೀವನೋಪಾ ಯವೂ ಇರಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿAದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕಳೆದ ೧೫ ದಿನಗಳ ಅವಧಿಯಲ್ಲಿ ಕೊಡಗು

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಆನೆಗಳ ದಾಳಿಗೆ ಮೂರು ಅಮೂಲ್ಯ ಜೀವಗಳು ಬಲಿಯಾಗಿವೆ. ಇದು ಅತ್ಯಂತ ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ತಿಳಿಯಲು ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು.

ನಾವು ಮೃತರ ಕುಟುಂಬಕ್ಕೆ ಪರಿಹಾರದ ಹಣ ಕೊಡಬಹುದು, ಆದರೆ ಅಮೂಲ್ಯ ಜೀವವನ್ನು ಮರಳಿ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿ ಆನೆಗಳು ನಾಡಿಗೆ ಬಂದ ಕೂಡಲೇ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ತೋಟಗಳಲ್ಲೇ ಬೀಡು ಬಿಡುವ ಆನೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು.

ಆನೆಗಳನ್ನು ಹಿಡಿಯಲು ಅನುಮತಿಗೆ ಕಾಯುತ್ತಾ ಸಮಯ ವ್ಯರ್ಥ ಮಾಡದಂತೆ ಸೂಚಿಸಿದ ಸಚಿವರು ಜನರ ಮೇಲೆ ದಾಳಿ ಮಾಡುವ ಆನೆಗಳನ್ನು ಗುರುತಿಸಿ ತಕ್ಷಣ ಹಿಡಿಯಲು ಕಾರ್ಯೋನ್ಮುಖವಾಗುವಂತೆ ಸೂಚಿಸಿದರು.

ಅರಣ್ಯದೊಳಗೆ ನೀಲಗಿರಿ, ತೇಗದ ಮರ ಹೆಚ್ಚಾಗಿವೆ. ಆನೆಗಳಿಗೆ ಸೊಪ್ಪು ಆಹಾರ ಸಿಗುತ್ತಿಲ್ಲ. ಹೀಗಾಗಿ ಅವು ಕಾಡಿನಿಂದ ನಾಡಿಗೆ ಬರುತ್ತಿವೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಹೀಗಾಗಿ ಅರಣ್ಯದೊಳಗೆ ಆನೆಗಳಿಗೆ ಆಹಾರ ಸಿಗುವಂತಹ ಗಿಡ ನೆಡುವ ಬಗ್ಗೆ ಚಿಂತಿಸಿ ಎಂದು ಈಶ್ವರ ಖಂಡ್ರೆ ನಿರ್ದೇಶನ ನೀಡಿದರು.

ಸೋಲಾರ್ ತಂತಿ ಬೇಲಿ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸಿದ ಸಚಿವರು, ಸೌರ ತಂತಿಬೇಲಿಗಳ ನಿರ್ವಹಣೆ ಹೇಗಿದೆ. ಅಳವಡಿಸಿರುವ ಎಷ್ಟು ಸೌರ ತಂತಿ ಬೇಲಿ ಕಾರ್ಯ ನಿರ್ವಹಿಸುತ್ತಿದೆ. ಎಷ್ಟು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ನಿಖರ ಮಾಹಿತಿ ಇರಬೇಕು. ಸೌರ ತಂತಿ ಬೇಲಿ ಸೂಕ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ ಎಂದು ಅವರು ಸೂಚಿಸಿದರು.

ಸೂಕ್ತವಾಗಿ ಸೌರ ತಂತಿ ಬೇಲಿ ನಿರ್ವಹಣೆ ಮಾಡದಿದ್ದರೆ, ಸರ್ಕಾರ ಮಾಡಿದ ವೆಚ್ಚವೆಲ್ಲ ವ್ಯರ್ಥವಾಗುತ್ತದೆ. ಆನೆಗಳ ಸಮಸ್ಯೆಯೂ ಪರಿಹಾರ ಆಗುವುದಿಲ್ಲ. ಹೀಗಾಗಿ ಸಂಬAಧಿತ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಆನೆಗಳ ಹಾವಳಿ ತಡೆಯಲು ಶಾಶ್ವತವಾದ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿದ್ಧಪಡಿಸಿ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಕೊಡಗು ಜಿಲ್ಲೆಯಲ್ಲಿ ಎಲ್ಲೆಲ್ಲಿ ರೈಲ್ವೆ ಬ್ಯಾರಿಕೇಡ್ ಅಗತ್ಯ ಇದೆ ಗುರುತಿಸಿ, ಜಿಲ್ಲೆಯಲ್ಲಿ ಎಷ್ಟು ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಹಾಕಬೇಕು ಎಂಬ ಬಗ್ಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು. ಸಭೆಯಲ್ಲಿ ಶಾಸಕರಾದ ಡಾ. ಮಂಥರ್ ಗೌಡ, ಎ.ಎಸ್. ಪೊನ್ನಣ್ಣ, ಅಪರ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.