ಕೂಡಿಗೆ, ಆ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ನದಿಯ ದಂಡೆಯ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ. ೯ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಗೊAಡಿದೆ.
ಸಣ್ಣ ನೀರಾವರಿ ಇಲಾಖೆಯ ಮೂಲಕ ಹಾರಂಗಿ ನದಿಯ ದಂಡೆಯಲ್ಲಿ ನೀರು ಎತ್ತುವ ಯಂತ್ರಗಳ ಅಳವಡಿಸುವಿಕೆಗೆ ಬೃಹತ್ ಕಟ್ಟಡ, ನಂತರ ಅದರ ಮುಖೇನ ಬೃಹತ್ ಪ್ರಮಾಣದ ಪೈಪ್ಲೈನ್ ಮೂಲಕ ಸೀಗೆಹೊಸೂರು ಗ್ರಾಮದ ಹಳೆಯ ಕಕ್ಕೆಹೊಳೆ ನಾಲೆ ನೀರು ಹರಿಯುವ ಕಾಲುವೆಗಳ ಮೂಲಕ ನೀರು ಹರಿಸಲು ಬೇಕಾಗುವ ನೆಲ ಟ್ಯಾಂಕ್ ಸೇರಿದಂತೆ ಉಪ ಕಾಲುವೆ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ತಲುಪಲು ಬೇಕಾಗುವ ಕಾಲುವೆಗಳ ಕಾಮಗಾರಿ ಭರದಿಂದ ಸಾಗುತ್ತಿದೆ.
ಏತ ನೀರಾವರಿ ಯೋಜನೆಯ ಮೂಲಕ ಹಾರಂಗಿ ನಾಲೆ ಮೇಲ್ಭಾಗದಲ್ಲಿ ಜಮೀನಿನ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ಈಗಾಗಲೇ ಕಕ್ಕೆ ಹೊಳೆಯ ನಾಲೆ ನೀರಿನ ಪ್ರಮಾಣದಲ್ಲಿ ಕಡಿಮೆಯಾದ ಹಿನ್ನೆಲೆಯಲ್ಲಿ ಸೀಗೆಹೊಸೂರು, ಗಂಗೆ ಕಲ್ಯಾಣ, ಭುವನಗರಿ, ಸೇರಿದಂತೆ ಉಪ ಗ್ರಾಮಗಳಿಗೆ ಬೇಸಾಯಕ್ಕೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಮತ್ತು ಆಯಾ ವ್ಯಾಪ್ತಿಯ ರೈತರ ಬೇಡಿಕೆಯ ಅನುಗುಣವಾಗಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿಯನ್ನು ಆರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ನೀರನ್ನು ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ಸ್ವಾಮಿ ತಿಳಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ.