ಪೊನ್ನಂಪೇಟೆ, ಆ. ೨೩: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ವಾರ್ಷಿಕ ಕ್ರಿಯಾಯೋಜನೆ ತಯಾರಿಸಿ ಅದರಂತೆ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ತೆರೆದು ಚಟುವಟಿಕೆಗಳನ್ನು ಮಾಡಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಹೊರಹೊಮ್ಮಿಸುವ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು. ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ ಮಾತನಾಡಿ ಹೆಚ್ಚು
ಮಕ್ಕಳನ್ನು ಜಿಲ್ಲಾ ಪುರಸ್ಕಾರ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆಗೆ ಸಜ್ಜು ಗೊಳಿಸಬೇಕು. ತರಬೇತಿ ಆದವರು ಮುಂದುವರೆದ ತರಬೇತಿ ಪಡೆದು ಕೊಳ್ಳಬೇಕು ಎಂದರು. ಬೇಸಿಗೆ ಶಿಬಿರ ನಡೆಸಿದ ಲಯನ್ಸ್ ಶಾಲೆ ಮತ್ತು ಕಾಪ್ಸ್ ಶಾಲೆಗಳಿಗೆ ಪ್ರಶಸ್ತಿ ಪತ್ರ ನೀಡಿದರು. ಗೀತ ಗಾಯನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಎಲ್ಲಾ ದಳ ನಾಯಕರು ಪ್ರಯತ್ನಿಸುವುದು, ರಾಷ್ಟೀಯ ಹಬ್ಬಗಳಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸಮವಸ್ತç ದೊಂದಿಗೆ ಭಾಗವಹಿಸುವುದು, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ದಳಗಳನ್ನು ಪ್ರಾರಂಭ ಮಾಡುವುದು, ವಾರ್ಷಿಕ ಸಭೆ ಮತ್ತು ಸಂಸ್ಥೆಯ ಚಟುವಟಿಕೆಗಳ ಕ್ರಿಯಾ ಯೋಜನೆಯನ್ನು ಜುಲೈ ತಿಂಗಳಲ್ಲಿ ಮಾಡುವುದು, ಕೃಷಿ ನಡಿಗೆ ಕಾರ್ಯಕ್ರಮವನ್ನು ಎಲ್ಲ ಶಾಲೆಗಳಲ್ಲಿ ಮಾಡುವುದು, ದ್ವಿತೀಯ ಸೋಪಾನ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಮಾಡುವುದು.
ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಡಿಸೆಂಬರ್ ಅಂತ್ಯದೊಳಗೆ ನಡೆಸುವುದು, ಮಕ್ಕಳಿಗೆ ಪರೀಕ್ಷೆಗೆ ಪೂರ್ವಭಾವಿ ಯಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು, ಮತ್ತು ಮಕ್ಕಳ ಮೇಳ ಮಾಡುವ ಕುರಿತು ನಿರ್ಣಯ ಕೈಗೊಂಡು ಚರ್ಚಿಸಲಾಯಿತು.
ಉಪಾಧ್ಯಕ್ಷರುಗಳಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚೇಂದಿರ ಬೋಪಣ್ಣ, ಆಲಿರಾ ಸಾದಲಿ, ಖಜಾಂಚಿ ಮುತ್ತಮ್ಮ, ಜಂಟಿ ಕಾರ್ಯದರ್ಶಿ ಕಾವೇರಿ, ಸ್ಕೌಟ್ ಮಾಸ್ಟರ್ಸ್ ಗೈಡ್ ಕ್ಯಾಪ್ಟನ್ಸ್, ಕಬ್ ಮಾಸ್ಟರ್ಸ್ ಫ್ಲಾಕ್ ಲೀಡರ್ಸ್ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಕಾವೇರಿ ಸ್ವಾಗತಿಸಿ, ಕಾರ್ಯದರ್ಶಿ ವಾಮನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.