ಗೋಣಿಕೊಪ್ಪ, ಆ. ೨೩: ಇಲ್ಲಿನ ಕಾಪ್ಸ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ಕೈಕೇರಿಯ ಸಮೀಪವಿರುವ ಕೊಳತ್ತೋಡು ಗ್ರಾಮದ ಮುರುವಂಡ ಬೋಪಣ್ಣ ಅವರ ಕೃಷಿ ಗದ್ದೆಯಲ್ಲಿ ಮಿಂದೆದ್ದರು. ಕೆಸರು ತುಂಬಿದ ನಾಟಿಗೆ ಸಿದ್ದವಾಗಿದ್ದ ಗದ್ದೆಯಲ್ಲಿ ನಾಟಿ ಮಾಡಿದರು. ತದನಂತರ ಖಾಲಿ ಗದ್ದೆಯಲ್ಲಿ ವಿವಿಧ ರೀತಿಯ ಆಟೋಟಗಳನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ವಾಮನ ಟಿ.ಕೆ., ಕಾಪ್ಸ್ ಶಾಲೆಯ ಸ್ಕೌಟ್ಸ್ ಮಾಸ್ಟರ್, ಪಾಟೀಲ್ ಎಸ್., ರೇಂಜರ್ ಲೀಡರ್ ಪುಷ್ಪ ಅಶೋಕ್, ಗೈಡ್ಸ್ ಕ್ಯಾಪ್ಟನ್ ಕಾವೇರಿ ಬಿ.ಎಸ್., ರೋವರ್ ಲೀಡರ್ ಸಂತೋಷ್ ಕುಮಾರ್ ಮತ್ತು ಮುರುವಂಡ ಬೋಪಣ್ಣ, ವಿನುತಾ ಬೋಪಣ್ಣ ಅವರು ಪಾಲ್ಗೊಂಡರು. ತದನಂತರ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಕ್ಕಳು ಸವಿದು ಶಾಲೆಯತ್ತ ತೆರಳಿದರು.