ನಾಪೋಕ್ಲು, ಆ. ೨೨: ಇತ್ತಿಚೀನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಗದ್ದೆ ನಾಟಿ ಓಟವು ನಾಪೋಕ್ಲು ಸಮೀಪದ ಬಿದ್ದಾಟಂಡ ದಿ. ದೇವಯ್ಯ ಅವರ ಬುಟ್ಯತ್ತಾಕ ಗದ್ದೆಯಲ್ಲಿ ವಿಜೃಂಭಣೆಯಿAದ ನೆರವೇರಿತು.

ಭತ್ತದ ಕೃಷಿ ಲಾಭದಾಯಕವಲ್ಲದಿದ್ದರೂ ಭತ್ತದ ಗದ್ದೆಗಳನ್ನು ಪಾಳು ಬಿಡುತ್ತಿರುವ ಈ ಕಾಲಘಟ್ಟದಲ್ಲಿ ನಾಟಿ ಓಟ ಎಂಬುದು ಮರೀಚಿಕೆಯಾಗಿದೆ. ಯುವ ಜನರಲ್ಲಿ ತಮ್ಮ ಸಾಂಪ್ರದಾಯಿಕ ಭತ್ತದ ಕೃಷಿ ಮತ್ತು ದಣಿದ ಮನಸ್ಸುಗಳ ಮನರಂಜನೆಗಾಗಿ ಹಮ್ಮಿಕೊಳ್ಳಲಾಗುತ್ತಿದ್ದ ನಾಟಿ ಓಟವನ್ನು ಪರಿಚಯಿಸುವ, ಉಳಿಸುವ ನಿಟ್ಟಿನಲ್ಲಿ ಬಿದ್ದಾಟಂಡ ಎಸ್. ತಮ್ಮಯ್ಯ ಕಾರ್ಯ ಪ್ರವೃತ್ತರಾಗಿದ್ದಾರೆ.

ಮನರಂಜನೆಯ ಓಟ: ಭತ್ತದ ಬೇಸಾಯದಲ್ಲಿ ನಾಟಿ ಕೆಲಸದ ಮಧ್ಯೆ ಅಥವಾ ಕೊನೆಯಲ್ಲಿ ಕೆಲಸದಿಂದ ದಣಿದ ರೈತರ ಮನೋರಂಜನೆಗಾಗಿ ಹಿಂದಿನ ಹಿರಿಯರು ನಡೆಸುತ್ತಿದ್ದುದೇ ಈ ನಾಟಿ ಓಟ. ಈ ನಾಟಿ ಓಟದ ಮುಂದುವರಿದ ಭಾಗವೇ ಈಗ ಅಲ್ಲಲ್ಲಿ ಕಂಡುಬರುತ್ತಿರುವ ಕೆಸರು ಗದ್ದೆ ಕ್ರೀಡಾಕೂಟ ಎನ್ನಬಹುದು. ಕೆಸರು ಗದ್ದೆ ಕ್ರೀಡಾಕೂಟಗಳನ್ನು ನಾಟಿಗೆ ಮೊದಲು ಕೆಸರು ಗದ್ದೆಗಳಲ್ಲಿ ನಡೆಸಲಾದರೆ, ನಾಟಿ ಓಟವನ್ನು ಗದ್ದೆಯಲ್ಲಿ ನಾಟಿ ಮಾಡಿದ ಅನಂತರ ನೆಟ್ಟ ನಾಟಿಯ ಮೇಲೆ ಆಯೋಜಿಸಲಾಗುತ್ತದೆ.

ನಾಟಿ ಓಟದ ಸಂಭ್ರಮ: ಮೊದಲೆಲ್ಲ ಗ್ರಾಮದ ಎಲ್ಲಾ ಕುಟುಂಬಸ್ಥರು ತಮ್ಮಲ್ಲಿರುವ ದೊಡ್ಡ ಗದ್ದೆಯನ್ನು ನಾಟಿ ಓಟದ ಗದ್ದೆಗೆ ಮೀಸಲಾಗಿಡುತ್ತಿದ್ದರು. ಈ ನಾಟಿ ಓಟದ ದಿನ ಮನೆಯವರಿಗೆಲ್ಲಾ ಸಡಗರ ಸಂಭ್ರಮ, ಇದಕ್ಕೆ ಹಲವು ದಿನಗಳಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ಊರವರ ಸಹಾಯ ಸಹಕಾರಗಳಿಂದ ಇಂತಹ ನಾಟಿ ಓಟಗಳು ಯಶಸ್ವಿಯಾಗಿ ನಡೆಯುತ್ತಿತ್ತು. ನಾಟಿಗೆ ನೆರೆದಿದ್ದ ಜನರಿಗೆ ಊಟ ಉಪಚಾರಗಳು ವ್ಯವಸ್ಥೆ ಮಾಡಲಾಗುತ್ತಿತ್ತು. ಆಧುನಿಕತೆಯ ನಂಟು ಕಡಿಮೆ ಇದ್ದ ಕಾಲವಾದುದರಿಂದ ಓಟದಲ್ಲಿ ವಿಜೇತರಾದವರಿಗೆ ಬಾಳೆ ಹಣ್ಣಿನ ಗೊನೆ. ತೆÀಂಗಿನಕಾಯಿ, ಹಲಸಿನ ಹಣ್ಣು, ಮೊದಲಾದ ಫಲಗಳನ್ನು ಬಹುಮಾನವಾಗಿ ನೀಡುತ್ತಿದ್ದರು.

ದೂರದ ನಿಗದಿ ಇಲ್ಲ: ಈ ಓಟಕ್ಕೆ ನಿಗದಿಪಡಿಸಿದ ದೂರದ ಲೆಕ್ಕಚಾರಗಳಿಲ್ಲ. ಆ ಗದ್ದೆಯ ವಿಸ್ತೀರ್ಣದ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿದರೆ ಮುಗಿಯಿತು. ಆದರೆ ಗದ್ದೆಗಳ ವಿಸ್ತೀರ್ಣ ದೊಡ್ಡದಾದಂತೆ ದೂರವು ಹೆಚ್ಚಾಗುವುದು. ಮೊದಲಿನ ಕಾಲದ ಓಟದ ಗದ್ದೆಗಳು ೪ ಎಕರೆಯಿಂದ ೧೦ ಎಕರೆಯ ವಿಸ್ತೀರ್ಣದವರೆಗೂ ಇರುತ್ತಿದ್ದವು. ಈ ನಾಟಿ ಮುಕ್ತಾಯದ ಕೊನೆ ಹಂತದಲ್ಲಿ ಗ್ರಾಮೀಣ ಭಾಷೆಯಲ್ಲಿ ಇದಕ್ಕೆಂದೆ ತಯಾರಿಸಲಾದ ವಿಶೇಷ ಹಾಡು ಮಾತ್ರ ಬಹಳ ಪ್ರಸಿದ್ಧಿ ಪಡೆದಿತ್ತು. ಹೋ ಹೊಯ್ಯ ಎಂಬ (ಕೊಡವ ಭಾಷೆಯಲ್ಲಿ ಹೊಯ್ಯ ಪಾಟ್) ಹಾಡು ಉದ್ಗರಿಸುತ್ತಾ ಸಂಭ್ರಮದಿAದ ಕೆಲಸದಲ್ಲಿ ತೊಡಗುತ್ತಿದ್ದರು. ನಾಟಿ ಮುಗಿದ ನಂತರ ಈ ಹಾಡನ್ನು ಮುಂದಿನ ಪೀಳಿಗೆಯವರು ಇತಿಹಾಸದಲ್ಲಿ ಹುಡುಕಬೇಕಾದಿತು ಎಂಬುದು ನಾಡಿನ ಹಿರಿಯರ ಆತಂಕ.

- ಪಿ.ವಿ. ಪ್ರಭಾಕರ್