ಕುಶಾಲನಗರ, ಆ. ೨೨: ಸಮಾಜದಲ್ಲಿ ಜನರಿಗೆ ಮೌಢ್ಯ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯ ಬೇಕಾದರೆ ವೈಜ್ಞಾನಿಕ ಮನೋ ಭಾವನೆ ಮತ್ತು ಮೌಢ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ ಎಂದು ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ವತಿಯಿಂದ ಕುಶಾಲನಗರ ಕನ್ನಿಕಾ ಹೋಟೆಲ್ ಸಭಾಂಗಣದಲ್ಲಿ ಸುಂಟಿಕೊಪ್ಪ ಜೆಸಿಐ, ಕುಶಾಲನಗರ ಕಾವೇರಿ ಜೆಸಿಐ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್. ಘಟಕದ ಸಹಯೋಗ ದೊಂದಿಗೆ "ಮೌಢ್ಯದ ವಿರುದ್ಧ ವಿಜ್ಞಾನ ನಡಿಗೆ" ಎಂಬ ಕಾರ್ಯಕ್ರಮದಡಿ ವೈಜ್ಞಾನಿಕ ಮನೋಭಾವನೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಂಡು ಮೌಢ್ಯದ ವಿರುದ್ಧ ಹೋರಾಟ ನಡೆಸಬೇಕು ಎಂದರು. ವೈಜ್ಞಾನಿಕ ಚಿಂತನೆಗಳು ಜನರಿಗೆ ತಲುಪುತ್ತಿದ್ದು ಅರಿವು ಉಂಟಾಗುತ್ತದೆ. ಆದರೆ, ಕೆಲವರು ವಿಚಾರವಾದಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನರೇಂದ್ರ ನಾಯಕ್ ವಿಷಾದಿಸಿದರು.

ಅಂಗೈಯಲ್ಲಿ ಮತ್ತು ಬಾಯಿಯೊಳಗೆ ಕರ್ಪೂರ ಉರಿಸುವುದು, ಶೂನ್ಯದಿಂದ ಬೂದಿ ಸೃಷ್ಠಿಸುವುದು, ಬರಿಗೈಯಿಂದ ಚಿನ್ನದ ಉಂಗುರ ಮತ್ತು ಹೊಸ ನೋಟು ಸೃಷ್ಠಿಸುವುದು ಮತ್ತಿತರ ಪ್ರಾತ್ಯಕ್ಷಿಕೆಗಳ ಮೂಲಕ ವಿವಿಧ ಪವಾಡವನ್ನು ಬಿಡಿಸಿ ಅದರ ಹಿಂದಿರುವ ರಹಸ್ಯ ಬಯಲಿಗೆಳೆಯುವ ಪ್ರಸಂಗಗಳನ್ನು ತೋರಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ವೈಜ್ಞಾನಿಕ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ವಿಜ್ಞಾನ ಪರಿಷತ್ತು ವತಿಯಿಂದ ಇಂತಹ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ವೈವಿಧ್ಯಮಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ದೂರ ಮಾಡುವ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಹುಸಿ ಪವಾಡಗಳನ್ನು ಅಲ್ಲಗಳೆದು ಸಮಾಜದಲ್ಲಿ ವೈಚಾರಿಕತೆಯ ಪ್ರಜ್ಞೆ ಮೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮೌಢ್ಯದ ವಿರುದ್ಧ ಹೋರಾಟ ನಡೆಸುತ್ತಿರುವ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರ ಸೇವಾ ಕಾರ್ಯ ಶ್ಲಾಘನೀಯವಾದುದು ಎಂದರು.

ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಇಂತಹ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮೌಢ್ಯತೆ ಬಗ್ಗೆ ಜಾಗೃತಿ ಮೂಡಿಸಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ಮೂಲಕ ವಿಜ್ಞಾನವನ್ನು ಜನಪ್ರಿಯ ಗೊಳಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು.

ಜಿಲ್ಲಾ ವಿಜ್ಞಾನ ಪರಿಷತ್ ಸಮಿತಿಯ ನಿರ್ದೇಶಕ ಎಂ.ಎನ್. ವೆಂಕಟನಾಯಕ್, ಪವಾಡಗಳ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತು ವಿವರಿಸಿದರು.

ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್, ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಜಿ. ಶ್ರೀಹರ್ಷ, ವಿಜ್ಞಾನ ಪರಿಷತ್ ಸದಸ್ಯರಾದ ಕೆ.ಎಸ್. ಮಹೇಶ್, ಎನ್.ಕೆ. ಮಾಲಾದೇವಿ, ಮಂಗಳೂರಿನ ವಿಚಾರವಾದಿ ಮಯೂರಶೆಟ್ಟಿ, ವೈಚಾರಿಕ ಚಿಂತಕ ಆಸ್ಟಿನ್ ಇತರರು ಇದ್ದರು.

ವೈಜ್ಞಾನಿಕ ಮನೋಭಾವನೆ ಬೆಳವಣಿಗೆ ಕುರಿತು ನಡೆದ ಚರ್ಚೆ ಮತ್ತು ಸಂವಾದದಲ್ಲಿ ಕೆ.ಬಿ. ರಾಧಾಕೃಷ್ಣ, ಸಿಆರ್‌ಪಿಕೆ ಶಾಂತ ಕುಮಾರ್, ವಿವಿಧ ಸಂಘಟನೆಗಳ ಪ್ರಮುಖರಾದ ವಿ. ಅಮೃತ್, ಕೆ.ವಿ. ಉಮೇಶ್, ಬಿ.ಬಿ. ಹೇಮಲತಾ, ಬಸವರಾಜ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.