ಕೂಡಿಗೆ, ಆ. ೨೩: ಏಡಿ ಹಿಡಿಯಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಮದಲಾಪುರದ ಹಾರಂಗಿಯ ನಾಲೆಯಲ್ಲಿ ನಡೆದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ನಿವಾಸಿ ಅಣ್ಣಪ್ಪ ಮತ್ತು ರಾಣಿ ದಂಪತಿ ಪುತ್ರ ಅನಿತ್ (೧೪) ಮೃತ ಬಾಲಕ.

ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿರುವ ಅನಿತ್ ಹಾಗೂ ಆತನ ಸ್ನೇಹಿತರಾದ ಸಂಜು, ಅಭಿ ದಿನಂಪ್ರತಿಯAತೆ ಅವರ ಮನೆಯಿಂದ ಶಾಲೆಗೆ ಹೊರಟು ಸಮೀಪದ ಮುಖ್ಯ ನಾಲೆಯ ರಸ್ತೆ ಮೂಲಕ ಹೋಗುವ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ನಾಲೆಯ ಬದಿಯಲ್ಲಿ ಏಡಿ ಕಾಣಿಸಿಕೊಂಡಿದೆ. ಈ ಸಂದರ್ಭ ಅನಿತ್ ಏಡಿಯನ್ನು ಹಿಡಿಯಲು ನೀರಿಗೆ ಇಳಿದಿದ್ದಾನೆ.

(ಮೊದಲ ಪುಟದಿಂದ) ನಾಲೆಯ ಅಂಚಿನಲ್ಲಿ ಕಾಲು ಜಾರಿದ ಪರಿಣಾಮವಾಗಿ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಸ್ನೇಹಿತ ಅಭಿ ರಕ್ಷಿಸಲು ನೀರಿಗೆ ಹಾರಿದ್ದಾನೆ. ಆದರೆ, ಅನಿತ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ.

ಶಾಲಾ ವಿದ್ಯಾರ್ಥಿಯು ನೀರಿನಲ್ಲಿ ಮುಳುಗಿದ ವಿಷಯವನ್ನು ಪೋಷಕರ, ಸ್ಥಳೀಯರ ಮೂಲಕ ಹಾರಂಗಿಯ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಒಂದು ಗಂಟೆಗಳ ಕಾಲ ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸಿ ಅಗ್ನಿಶಾಮಕ ದಳದ ಮೂಲಕ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಬಿದ್ದ ಜಾಗದಿಂದ ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. ೨೪ರಂದು (ಇಂದು) ಅಂತ್ಯಕ್ರಿಯೆ ನಡೆಯಲಿದೆ.