ಸಿದ್ದಾಪುರ, ಆ. ೨೨: ಬಾಡಗ ಬಾಣಂಗಾಲ ಗ್ರಾಮ ಮಟ್ಟಂ ಎಂಬಲ್ಲಿ ಸೋಮವಾರದಂದು ಕಾಡಾನೆ ದಾಳಿಗೆ ಸಿಲುಕಿ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಆ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.

ತಾ. ೨೧ರಂದು ವಾಯುವಿಹಾರ ತೆರಳುತಿದ್ದ ಆಯಿಷಾ ಎಂಬ ಮಹಿಳೆಗೆ ಕಾಡಾನೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಜಿಲ್ಲಾ ಆನೆ ಕಾರ್ಯ ಪಡೆಯ ಮುಖ್ಯಸ್ಥ ಎ.ಟಿ. ಪೂವಯ್ಯ ಹಾಗೂ ವೀರಾಜಪೇಟೆ ಡಿ.ಎಫ್.ಓ. ಶರಣಬಸಪ್ಪ ಮಾರ್ಗದರ್ಶನದಲ್ಲಿ ತಿತಿಮತಿ ಎ.ಸಿ.ಎಫ್. ಸೀಮಾ ನೇತೃತ್ವದಲ್ಲಿ ಕಳೆದೆರೆಡು ದಿನಗಳಿಂದ ಬಾಡಗ ಬಾಣಂಗಾಲ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಸಂದರ್ಭದಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಉಷಾ ಎಂಬ ಹೆಸರಿನ ಕಾಡಾನೆಯೊಂದಿಗೆ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಸುತ್ತಾಡುತ್ತಿರುವ ಮಾಹಿತಿಗಳು ಅರಣ್ಯ ಇಲಾಖೆಗೆ ತಿಳಿದು ಬಂದಿದೆ. ಈ ಪೈಕಿ ಮೂರು ಮರಿಯಾನೆಗಳು ಸೇರಿದಂತೆ ೧೧ ಕಾಡಾನೆಗಳು ಪತ್ತೆ ಆಗಿವೆ. ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಮಾಲ್ದಾರೆ ವ್ಯಾಪ್ತಿಯ ಅರಣ್ಯಕ್ಕೆ ಅಟ್ಟಿಸಿದ್ದರು ಕೂಡ ಮರಳಿ ರಾತ್ರಿ ಸಮಯದಲ್ಲಿ ಕಾಫಿ ತೋಟಗಳ ಒಳಗೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.