ಹಿರಿಯ ನಾಗರಿಕರ ದಿನಾಚರಣೆ ತುಂಬಾ ಅರ್ಥಪೂರ್ಣವಾದದ್ದು. ಮಾಗಿದ ಹಣ್ಣಿನ ರುಚಿ ಹೇಗಿರುವುದೋ, ಅಂತೇ ಹಿರಿಯ ನಾಗರಿಕರು ಅನುಭವಗಳಲ್ಲಿ ಮಾಗಿದವರೇ ಆಗಿರುತ್ತಾರೆ. ಜೀವನಸಾರವನ್ನು ಅರಿತಿರುತ್ತಾರೆ. ಇವರು ಕಷ್ಟ - ಸುಖಗಳನ್ನು ನಿಭಾಯಿಸಿಕೊಂಡು ಹೋಗುವುದನ್ನು ಕಲಿತಿರುತ್ತಾರೆ. ಸಾಮಾನ್ಯವಾಗಿ ೬೦ ವರ್ಷಗಳ ಮೇಲ್ಪಟ್ಟವರನ್ನು ಹಿರಿಯ ನಾಗರಿಕರೆಂದು ಪರಿಗಣಿಸುತ್ತಾರೆ. ಜೀವನದಲ್ಲಿ ಕುಟುಂಬ, ಮನೆ, ಸಂಸಾರ ಎಲ್ಲವನ್ನೂ ನಿಭಾಯಿಸಿ, ಮಕ್ಕಳನ್ನು ಸಾಕಿ ಅವರ ಮದುವೆ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಿ, ಜೊತೆಗೆ ಬದುಕಿದಾಗ ಯಾವುದಾದರೂ ಕೆಲಸ ಅಥವಾ ವೃತ್ತಿಯನ್ನು ಹೊಂದಿ ೬೦ ವರ್ಷಗಳಲ್ಲಿ ಬದುಕಿನ ಏರುಪೇರುಗಳನ್ನೆಲ್ಲಾ ಅನುಭವಿಸಿ, ಮೊಮ್ಮಕ್ಕಳನ್ನು ಪಡೆದು ಹಿರಿಯರೆಂದೆನ್ನಿಸಿಕೊಳ್ಳುತ್ತಾರೆ.

ಹಿರಿಯ ನಾಗರಿಕರಾಗಲು ಅವರೂ ಬಾಲ್ಯ, ಯೌವನವನ್ನು ಅನುಭವಿಸಿ ಮುಪ್ಪಿನ ಬಳಿ ಬಂದಿರುತ್ತಾರೆ. ಹಿರಿಯರ ಮಾರ್ಗದರ್ಶನ ಕಿರಿಯರಿಗೆ ಸದಾ ಅವಶ್ಯ. ಹಿರಿಯರಿದ್ದರೆ ಸಂಸಾರದ ಆಗು-ಹೋಗುಗಳು ಸರಾಗ. ಹಿರಿಯರಿಲ್ಲದ ಸಂಸಾರ ನಾವಿಕನಿಲ್ಲದ ದೋಣಿಯಂತೆ. ಸಂಸಾರ ಸರಿದಾರಿಯಲ್ಲಿ ಸಾಗಲು ಹಿರಿಯರು ತಮ್ಮ ಜೀವನ ಸಮಸ್ತ ಅನುಭವವನ್ನು ಧಾರೆ ಎರೆಯುತ್ತಾರೆ. ಕಷ್ಟಗಳು ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಜೀವನ ನಡೆಸುವ ಬುದ್ಧಿವಂತಿಕೆಯನ್ನು ಸಂಸಾರದ ಸದಸ್ಯರಿಗೆ ಹೇಳಿಕೊಡುತ್ತಾರೆ. ಜೀವನದಲ್ಲಿ ಸದಸ್ಯರು ಹೇಗೆ ನಡೆದುಕೊಳ್ಳಬೇಕು ಎಂಬ ಮಾರ್ಗದರ್ಶನವನ್ನು ಸಮಯ ಸಂದರ್ಭಗಳಿಗನುಸಾರವಾಗಿ ಮಾಡುತ್ತಾರೆ. ಕಿರಿಯರನ್ನು ಅವರು ಸದಾ ಪ್ರೋತ್ಸಾಹಿಸುತ್ತಾರೆ. ಸಂಸಾರದ ಸದಸ್ಯರು ಸಶಕ್ತರಾಗಲು ಹಿರಿಯ ನಾಗರಿಕರು ಸಕಲ ವಿಧಗಳಲ್ಲೂ ಸಹಾಯ ಮಾಡುತ್ತಾರೆ.

ಇಂದು ದೇಶವನ್ನು ಮುನ್ನಡೆಸುವಲ್ಲಿ ಹಿರಿಯ ನಾಗರಿಕರ ಪಾತ್ರವು ಅತೀ ಮುಖ್ಯವಾಗಿದೆ. ಯಾವುದೇ ಪಕ್ಷವಿರಲಿ, ಸರಕಾರಗಳಿರಲಿ. ಇಲ್ಲಿ ಹಿರಿಯರೇ ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಹಿರಿಯರಲ್ಲಿ ಯಾವುದೇ ದುಡುಕು ಇರುವುದಿಲ್ಲ. ಸರಿಯಾದ ಹೆಜ್ಜೆಗಳನ್ನು ತಾಳ್ಮೆಯಿಂದ ಇಟ್ಟು ಬುದ್ಧಿವಂತಿಕೆಯಿAದ ನಿರ್ಧಾರಗಳನ್ನು ಕೈಗೊಂಡು ದೇಶ ನಡೆಸುತ್ತಾರೆ. ಇವರು ದೇಶದ ಆಸ್ತಿಯಾಗುತ್ತಾರೆ. ಹಿರಿಯ ನಾಗರಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ.

- ಹರೀಶ್ ಸರಳಾಯ, ಮಡಿಕೇರಿ.