ಮಡಿಕೇರಿ, ಆ. ೨೦: ಸಮಾನತೆಯ ಹರಿಕಾರ, ಅಭಿವೃದ್ಧಿಯ ಗುರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥÀರ್ ಗೌಡ ಬಣ್ಣಿಸಿದ್ದಾರೆ.
ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ದೇವರಾಜ ಅರಸು ಅವರ ೧೦೮ ನೇ ಮತ್ತು ರಾಜೀವ್ ಗಾಂಧಿಯವರ ೭೯ ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಈ ಇಬ್ಬರು ನಾಯಕರು ತಾವು ನೀಡಿದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಧ್ಯೇಯದ ಆಡಳಿತ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಾವು ಯಾವತ್ತೂ ಬಡವರ, ಶೋಷಿತರ, ಧಮನಿತರ ಪರವಾಗಿ ಧ್ವನಿಯಾಗಿ ಇರುತ್ತೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಒಬ್ಬ ಪ್ರಧಾನಿಯಿಂದ ಇಷ್ಟು ದೊಡ್ಡ ದೇಶವನ್ನಾಳಲು ಸಾಧ್ಯವಿಲ್ಲ ಎಂದು ಮನಗಂಡು ಸಂವಿಧಾನದ ೭೩ ಮತ್ತು ೭೪ ನೇ ತಿದ್ದುಪಡಿಯಂತೆ ಅಧಿಕಾರದ ವಿಕೇಂದ್ರಿಕರಣಕ್ಕೆ ಕಾರಣರಾದರು. ಇದರ ಫಲವಾಗಿ ೨೦೦೦ ಇಸವಿಯಲ್ಲಿ ಒರಿಸ್ಸಾದ ನಗರಸಭೆಯೊಂದರ ಅಧ್ಯಕ್ಷರಾಗಿದ್ದ ದ್ರೌಪದಿ ಮರ್ಮು ಇಂದು ರಾಷ್ಟçದ ಮಹೋನ್ನತ ಹುದ್ದೆಯಾದ ರಾಷ್ಟçಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.
ಹಿಂದುಳಿದ ಘಟಕದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ದೇವರಾಜ ಅರಸುರವರು ದೀನ ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣದ ಮೂಲಕ ರಾಜ್ಯದ ಜನತೆಯನ್ನು ಉದ್ದಾರ ಮಾಡಿದ ಮಹಾನ್ ಚೇತನ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ದೇಶದ ಪ್ರಧಾನಿ ಹೇಗಿರಬೇಕು, ರಾಜ್ಯದ ಮುಖ್ಯಮಂತ್ರಿ ಹೇಗಿರಬೇಕು ಎಂಬುದಕ್ಕೆ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಮಾದರಿಯಾಗಿದ್ದಾರೆ ಎಂದು ಹೇಳಿದರು. ಅರಸುರವರು ಸಮಾಜದಲ್ಲಿ ಕ್ರಾಂತಿ ಮಾಡಿದ್ದರೆ ರಾಜೀವ್ ಗಾಂಧಿ ಅಭಿವೃದ್ಧಿಯ ಕ್ರಾಂತಿ ಮಾಡಿದರು ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಸಾಧನೆಗಳನ್ನು ವಿವರಿಸಿದರು.
ಸಂವಿಧಾನದ ಪೀಠಿಕೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಠಿಸಿ ಸಾಮೂಹಿಕವಾಗಿ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಕೆಪಿಸಿಸಿ ಪ್ರಮುಖರಾದ ಟಿ.ಪಿ. ರಮೇಶ್, ಯಾಕುಬ್, ಕೆ.ಕೆ. ಮಂಜುನಾಥ್ ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪರಿಶಿಷ್ಟ ವರ್ಗದ ಅಧ್ಯಕ್ಷ ಜಯೇಂದ್ರ, ಕಾರ್ಮಿಕ ವರ್ಗದ ಅಧ್ಯಕ್ಷ ದಿನೇಶ್, ಸಂಘಟನೆಯ ಬ್ಲಾಕ್ ಅಧ್ಯಕ್ಷ ಶಿವಾನಂದ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್ ಸ್ವಾಗತಿಸಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ಬ್ಲಾಕ್ ಅಧ್ಯಕ್ಷ ಚೆರಿಯಮನೆ ಭಾರ್ಗವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.