ಸಿದ್ದಾಪುರ, ಆ. ೨೦: ತಡರಾತ್ರಿ ಮನೆಯ ಅಂಗಳಕ್ಕೆ ನುಗ್ಗಿದ ಎರಡು ಕಾಡಾನೆಗಳು ದಾಂಧಲೆ ನಡೆಸಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಕರಡಿಗೋಡು ಗ್ರಾಮದ ಜೇಕಬ್ ಚೇರಿಯನ್ ಎಂಬವರ ಮನೆಯ ಅಂಗಳಕ್ಕೆ ಶನಿವಾರ ನಸುಕಿನ ಜಾವ ೩ ಗಂಟೆಯ ವೇಳೆಗೆ ಎರಡು ಕಾಡಾನೆಗಳು ಲಗ್ಗೆ ಇಟ್ಟಿವೆ. ಮನೆಯ ಬಾಗಿಲಿನ ಬಳಿ ತೆರಳಿ ಘೀಳಿಗಿಟ್ಟಿದೆಂದು ಜೇಕಬ್‌ರವರ ಪತ್ನಿ ತಿಳಿಸಿದ್ದಾರೆ.
ಎರಡು ಕಾಡಾನೆಗಳು ಸೇರಿ ಜೇಕಬ್ ಚೇರಿಯನ್ ಅವರ ನಾಯಿಗೂಡಿನ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ. ಅಲ್ಲದೇ ಇವರಿಗೆ ಸೇರಿದ ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದೆ. ಕಾಡಾನೆಗಳು ಇವರ ಮನೆ ಗೋಡೆಯ ಬಳಿ ಬಂದು ಸುತ್ತಾಡಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಾನೆ ಗಳು ನಡುರಾತ್ರಿ ಮನೆಯ ಬಳಿ ದಾಂಧಲೆ ನಡೆಸಿ ಭಯ ಹುಟ್ಟಿಸಿದಲ್ಲದೇ ನಾಯಿಯ ಗೂಡಿನ ಮೇಲೆ ದಾಳಿ ನಡೆಸಿರುವ ಬಗ್ಗೆ ವೀರಾಜಪೇಟೆ ವಲಯ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಆದರೆ, ಅರಣ್ಯ ಇಲಾಖಾಧಿಕಾರಿ ಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ತೆಗೆಯಲಾದ ಕಂದಕಗಳು ಮಣ್ಣು ಮುಚ್ಚಿದೆ ಹಾಗೂ ಸೋಲಾರ್ ಬೇಲಿಗಳ ನಿರ್ವಹಣೆ ಇಲ್ಲದೇ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳು ಭೇಟಿ ನೀಡಿದ ಸಂದರ್ಭ ಚೆರಿಯನ್ ಅವರ ಪತ್ನಿ ತರಾಟೆಗೆ ತೆಗೆದುಕೊಂಡರು.