ಮಡಿಕೇರಿ, ಆ. ೨೦: ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ದಾಂಧಲೆ ಮಿತಿಮೀರಿದ್ದು, ನಿನ್ನೆ ರಾತ್ರಿ ಕಾರೊಂದರ ಮೇಲೆ ದಾಳಿಗೆ ಯತ್ನಿಸಿದೆ. ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ.
ಮೈಸೂರಿನಿಂದ ಅಜ್ಜಮಾಡ ಸುಬ್ಬಯ್ಯ, ಧೀರಜ್ ಸುಬ್ಬಯ್ಯ ಅವರು ಕುರ್ಚಿ ಗ್ರಾಮದ ತಮ್ಮ ಮನೆಗೆ ಬರುವ ಸಂದರ್ಭ ಕುರ್ಚಿ ಗ್ರಾಮದ ಬಸ್ ಶೆಲ್ಟರ್ ಬಳಿ ಎರಡು ಆನೆಗಳು ಕಂಡು ಬಂದಿವೆ. ತಕ್ಷಣ ಸುಬ್ಬಯ್ಯ ಅವರು ಕಾರನ್ನು ಹಿಂದಕ್ಕೆ ತೆಗೆದಿದ್ದಾರೆ. ಈ ವೇಳೆ ಆನೆ ದಾಳಿಗೆ ಯತ್ನಿಸಿ ನಂತರ ತೆರಳಿದೆ. ಇದರಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಡಗು ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.