ಗೋಣಿಕೊಪ್ಪಲು, ಆ. ೨೦: ಪರಿಶಿಷ್ಟ ಜಾತಿ ಮತ್ತು ಪಂಗಡ ಉಪಯೋಜನೆಗೆ ಮೀಸಲಿರಿಸಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸದೇ ಸಂಪೂರ್ಣ ಹಣವನ್ನು ದಲಿತರ ಅಭಿವೃದ್ಧಿಗೆ ಉಪಯೋಗಿಸಬೇಕು. ಸರ್ಕಾರ ಹೊರಡಿಸಿರುವ ವೈಟ್ ಬೋರ್ಡ್ ವಾಹನ ಇರುವವರಿಗೆ ಬಿ.ಪಿ.ಎಲ್. ರೇಷನ್ ಕಾರ್ಡನ್ನು ರದ್ದು ಪಡಿಸುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಈ ಬಗ್ಗೆ ಸೂಕ್ತ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್‌ಮೆಂಟ್‌ನಿAದ ಪ್ರತಿಭಟನೆ ನಡೆಯಿತು.
ಕೊಡಗು ಜಿಲ್ಲೆ ಮಲೆನಾಡು ಪ್ರದೇಶವಾಗಿರುವುದರಿಂದ ಸೀಮೆಎಣ್ಣೆ ಇಲ್ಲದೆ ಕಾರ್ಮಿಕ ವರ್ಗದವರಿಗೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಕೂಡಲೇ ಸೀಮೆ ಎಣ್ಣೆಯನ್ನು ವಿತರಿಸಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟು ಪೊನ್ನಂಪೇಟೆ ತಾಲೂಕು ಕಚೇರಿಯ ಮುಂದೆ ಆಲ್ ಇಂಡಿಯ ದಲಿತ್ ರೈಟ್ಸ್ ಮೂವ್‌ಮೆಂಟ್ ರಾಜ್ಯ ಸಂಚಾಲಕ ರಮೇಶ್ ಮಾಯಮುಡಿ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕ ರಮೇಶ್, ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ರೂ. ೧೧ ಸಾವಿರ ಕೋಟಿ ಈ ಯೋಜನೆಗೆ ವೆಚ್ಚ ಮಾಡಲು ತೀರ್ಮಾನಿಸಿರುವುದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ದಿಗೆ ಹಣದ ಕೊರತೆ ಎದುರಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ದಲಿತರ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ಆಗ್ರಹಿಸಿದರು.
ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಆಲ್ ಇಂಡಿಯ ದಲಿತ್ ರೈಟ್ಸ್ ಮೂವ್‌ಮೆಂಟ್ ರಾಜ್ಯಸಮಿತಿ ಸದಸ್ಯರಾದ ಬಿ.ಕೆ. ಶಾಂತಿ, ವೈ.ಎ. ಗೀತಾ, ಐ.ಎಂ. ಬೋಜಿ, ತಾಲೂಕು ಸಂಚಾಲಕ ಹೆಚ್.ಆರ್. ಪವನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.