ಕುಶಾಲನಗರ, ಆ.೨೦: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸತತವಾಗಿ ಮಾಡುವ ಮೂಲಕ ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಕೊಡಗು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಕುಶಾಲನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮೈಸೂರು- ಬೆಂಗಳೂರು ರಸ್ತೆ ನಿರ್ಮಾಣ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇನೆ. ಇದೀಗ ಮೈಸೂರಿನಿಂದ ಕುಶಾಲನಗರ ತನಕ ಹೈವೇ ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ. ಕೊಡಗು ಜಿಲ್ಲೆಯಲ್ಲಿ ೬೨ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ದೊರೆತಿದೆ. ಕೋಟ್ಯಂತರ ರೂಗಳ ವೆಚ್ಚದಲ್ಲಿ ಕೊಡಗು ಜಿಲ್ಲೆಯ ಗ್ರಾಮಾಂತರ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಸಂಪಾಜೆ ಮಡಿಕೇರಿ ತನಕ ರಸ್ತೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಮೈಸೂರು ಕುಶಾಲನಗರ ರೈಲ್ವೆ ಯೋಜನೆಗೆ ಅಂತಿಮ ಸರ್ವೆ ಕಾರ್ಯ ನಡೆದಿದೆ. ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ನಾನೇ ಮುಂದಿನ ಲೋಕಸಭಾ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿದ್ದೇನೆ. ನನ್ನನ್ನು ಬಿಟ್ಟು ಯಾರಾದರೂ ಇದ್ದಾರಾ ಅನ್ನುವ ಪ್ರಶ್ನೆ ಸುದ್ದಿಗಾರರಿಗೆ ಕೇಳುವ ಮೂಲಕ ಮುಂದಿನ ಚುನಾವಣೆಗೆ ತಾನೇ ಅಭ್ಯರ್ಥಿ ಎಂಬುದನ್ನು ಪ್ರತಾಪ್ ಸಿಂಹ ನೇರವಾಗಿ ಹೇಳಿಕೊಂಡರು. ಈ ಸಂದರ್ಭ ಬಿಜೆಪಿ ಪ್ರಮುಖರಾದ ಬಿ.ಬಿ. ಭಾರತೀಶ್ ಇದ್ದರು.