ಮಡಿಕೇರಿ, ಆ. ೨೦: ಹೂಕಾಡು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಗ್ಗೋಡು ಗ್ರಾಮದ ಆಶಾ ಕಾರ್ಯಕರ್ತೆ ಯಶೋಧ ಕುಮಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಎದೆ ಹಾಲಿನ ಮಹತ್ವದ ಕುರಿತು ಮಾಹಿತಿ ನೀಡಿದರು.
ಎದೆ ಹಾಲು ಅಮೃತಕ್ಕೆ ಸಮಾನ. ಪ್ರತಿಯೊಬ್ಬ ತಾಯಿಯು ಮಗು ಹುಟ್ಟಿದ ಅರ್ಧ ಗಂಟೆಯೊಳಗೆ ಹಾಲನ್ನು ಮಗುವಿಗೆ ತಪ್ಪದೆ ಕುಡಿಸಬೇಕು ಎಂದರು. ಈ ಹಾಲು ಕುಡಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಾಲಿನಲ್ಲಿ ಪ್ರೋಟೀನ್ ಮತ್ತು ವಿಟಮಿನ್ 'ಎ' ಹೇರಳವಾಗಿ ಸಿಗುತ್ತದೆ. ಮಗುವಿಗೆ ಆರು ತಿಂಗಳುಗಳ ಕಾಲ ಎದೆಹಾಲನ್ನು ಮಾತ್ರ ಕುಡಿಸಬೇಕು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಇತರ ಆಹಾರವನ್ನು ನೀಡಬೇಕು. ನಮ್ಮ ಮಕ್ಕಳ ಆರೋಗ್ಯ ನಮ್ಮ ಕೈಯಲ್ಲಿ ಇರುವುದರಿಂದ ಯಾವುದೇ ಜಾಹೀರಾತುಗಳಿಗೆ ಮರುಳಾಗದೆ, ಎರಡು ಎದೆಹಾಲನ್ನು ಮಾತ್ರ ಕುಡಿಸಬೇಕು. ಮಗು ಅನಾರೋಗ್ಯದಿಂದ ಬಳಲುತ್ತಿರುವಾಗ ಎದೆಹಾಲು ಕುಡಿಸುವುದನ್ನು ನಿಲ್ಲಿಸಬಾರದು ಎಂದು ಕಿವಿಮಾತು ಹೇಳಿದರು.
ಎದೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಎದೆ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚುತ್ತದೆ. ಎದೆ ಹಾಲುಣಿಸುವುದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಎದೆ ಹಾಲಿನ ಬದಲು ಬೇರೆ ಹಾಲು ಕುಡಿಸುವುದರಿಂದ ಮಕ್ಕಳು ಅನಾರೋಗ್ಯಕ್ಕೀಡಾಗಬಹುದು. ಹಾಲುಣಿಸುವಾಗ ತಾಯಿಯ ಗಮನ ಕೇವಲ ಮಗುವಿನ ಕಡೆಗೆ ಮಾತ್ರ ಇರಬೇಕು. ತಾಯಿಯು ಸರಿಯಾದ ಕ್ರಮದಲ್ಲಿ ಕುಳಿತುಕೊಂಡು ಮಗುವಿಗೆ ಎದೆ ಹಾಲನ್ನು ಕುಡಿಸಬೇಕು ಎಂದು ವಿವರಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಶ್ರೀ, ಸಹಾಯಕಿ ಲೀಲಾ, ಗ್ರಾಮದ ಗರ್ಭಿಣಿ, ಬಾಣಂತಿಯರು, ಮಕ್ಕಳ ತಾಯಂದಿರು ಪಾಲ್ಗೊಂಡಿದ್ದರು.