ಮುಳ್ಳೂರು, ಆ. ೨೦: ರಾಜ್ಯ ಸರಕಾರ ಈಗಾಗಲೇ ಘೋಷಣೆ ಮಾಡಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದು, ಈ ನಿಟ್ಟಿನಲ್ಲಿ ಜನರು ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಆಗಿದ್ದು, ಸಾರ್ವಜನಿಕರ ಕೆಲಸಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಹಂತಹAತವಾಗಿ ಮಾಡಲಾಗುವುದು. ಈ ದಿಸೆಯಲ್ಲಿ ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನನ್ನ ಕಚೇರಿಗೆ ಹಾಗೂ ನಮ್ಮ ಮನೆಗೆ ಬಂದು ದೂರು ಸಲ್ಲಿಸಲು ಮುಕ್ತ ಅವಕಾಶ ಇದೆ. ಯಾವ ಮಧ್ಯವರ್ತಿಗಳ ಸಹಾಯ ಇಲ್ಲದೆ ಬರಬಹುದಾಗಿದೆ ಎಂದು ಹೇಳಿದರು.

ಗ್ರಾ.ಪಂ. ಮಟ್ಟದಲ್ಲಿ ಆಗ ಬೇಕಾಗಿರುವ ಅಭಿವೃದ್ಧಿ ಮತ್ತು ಸಾರ್ವಜನಿಕರ ಕೆಲಸಗಳನ್ನು ಸಂಬAಧಿಸಿದ ಪಿಡಿಓ, ಅಧ್ಯಕ್ಷರು, ಸದಸ್ಯರು ಒಟ್ಟುಗೂಡಿ ಮಾಡಿ ಕೊಡಬೇಕು, ಗ್ರಾಮಸ್ಥರ ಸಮಸ್ಯೆಗೂ ಸ್ಪಂದಿಸಬೇಕು, ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದಲ್ಲಿ ನನಗೆ ದೂರು ನೀಡುವಂತೆ ಶಾಸಕರು ತಿಳಿಸಿದರು.

ಸಭೆಯಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ವೀರೇಂದ್ರಕುಮಾರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಪ್ರಮುಖರಾದ ಕಾಂತರಾಜ್, ಎಸ್.ಸಿ.ಶರತ್‌ಶೇಖರ್, ಎಚ್.ಬಿ.ಜಯಮ್ಮ, ಜನಾರ್ಧನ್, ಶಿವಾನಂದ್, ಸಂದೀಪ್, ಎಸ್.ಕೆ. ವೀರಪ್ಪ, ಭರತ್, ಅಶ್ವಥ್ ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ, ಉಪಾಧ್ಯಕ್ಷ ಅಶೋಕ್, ಪಿಡಿಓ ಮೇದಪ್ಪ, ಜಿ.ಪಂ. ಇಂಜಿನಿಯರ್ ವೀರೇಂದ್ರಕುಮಾರ್, ಸಲೀಂ, ಶನಿವಾರಸಂತೆ ವೃತ್ತ ನಿರೀಕ್ಷಕ ಮಂಜುನಾಥ್, ಕೊಡ್ಲಿಪೇಟೆ ಆರ್‌ಐ ಮನುಕುಮಾರ್ ಮತ್ತು ಸಾರ್ವಜನಿಕರು ಇದ್ದರು.

ಹಂಡ್ಲಿ ಗ್ರಾ.ಪಂ. ಭೇಟಿ ನೀಡಿದ ನಂತರ ಶಾಸಕ ಮಂಥರ್‌ಗೌಡ ಬೆಸೂರು, ಬ್ಯಾಡಗೊಟ್ಟ ಮತ್ತು ಕೊಡ್ಲಿಪೇಟೆ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.