ಮಡಿಕೇರಿ, ಆ. ೨೦ : ‘ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ’ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಕ್ಕಳ ದಿನಾಚರಣೆ-೨೦೨೩ ರ ಪ್ರಯುಕ್ತ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ೬ ರಿಂದ ೧೮ ವರ್ಷದೊಳಗಿನ ಬಾಲಕರಿಗಾಗಿ “ಹೊಯ್ಸಳ ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ’’ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಕರಣವು ೨೦೨೨ ರ ಆಗಸ್ಟ್ ೧ ರಿಂದ ೨೦೨೩ ರ ಜುಲೈ ೩೧ ರೊಳಗೆ ನಡೆದಿರಬೇಕು. ೨೦೦೫ ರ ಆಗಸ್ಟ್ ೧ ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ. ೧೦ ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ ೫ ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ. ೨೫ ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.೧ ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಮಕ್ಕಳ ದಿನಾಚರಣೆ-೨೦೨೩ ನೇ ಸಾಲಿನ ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‌ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ (ದೂರವಾಣಿ: ೦೮೨೭೨-೨೯೮೩೭೯) ಇವರಿಗೆ ಸೆಪ್ಟೆಂಬರ್ ೧೫ ರೊಳಗೆ ಸಲ್ಲಿಸತಕ್ಕದ್ದು. ಅರ್ಜಿಯನ್ನು ಕನ್ನಡ ಭಾಷೆಯಲ್ಲಿಯೇ ಸಲ್ಲಿಸಬೇಕು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.