ಶನಿವಾರಸಂತೆ, ಆ. ೧೯: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಕ್ಯಾತೆ ಗ್ರಾಮದ ಲೋಕೇಶ್ ಅವರ ಪತ್ನಿ ಆಶಾ(೪೮) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಲೋಕೇಶ್ ಮೊದಲ ಪತ್ನಿ ಜಾನಕಿ ಸಾವನ್ನಪ್ಪಿದ ಬಳಿಕ ಆಶಾರನ್ನು ೨ನೇ ವಿವಾಹವಾಗಿದ್ದರು. ಬೆಳಿಗ್ಗೆ ಮಗ ಮತ್ತು ಮಗಳು ಕೆಲಸಕ್ಕೆ ತೆರಳಿದ್ದು ಪತಿ ಲೋಕೇಶ್ ಅನಾರೋಗ್ಯ ಕಾರಣ ಮನೆಯಲ್ಲಿ ಮಲಗಿದ್ದರು.ಈ ಸಂದರ್ಭ ಆಶಾ ಮನೆಯ ಹೊರಭಾಗದಲ್ಲಿರುವ ಸೌದೆ ಕೊಟ್ಟಿಗೆಯ ಮೇಲ್ಛಾವಣಿಯ ಕಬ್ಬಿಣದ ರಾಡಿಗೆ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಶಾ, ತಮ್ಮ ಮಗಳ ಮದುವೆಗೆ ಸಂಘಗಳಲ್ಲಿ ಸಾಲ ಮಾಡಿದ್ದರು. ಪತಿ ಹಾಗೂ ಮಗಳು ಸಾಲ ತೀರಿಸುವುದಾಗಿ ಹೇಳಿದ್ದರೂ ಸಾಲ ಕಟ್ಟಲಾಗದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪುತ್ರ ಭೋಗರಾಜ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು.