ಸೋಮವಾರಪೇಟೆ, ಆ. ೧೬: ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪೋಷಕರ ಜವಾಬ್ದಾರಿ ಮುಗಿಯಿತು ಎಂದು ತಿಳಿಯಬಾರದು. ಶಾಲೆ-ಕಾಲೇಜುಗಳಿಗೆ ತೆರಳಿದ ನಂತರ ಅವರ ಚಟುವಟಿಕೆಗಳ ಮೇಲೆ ಪೋಷಕರು ನಿಗಾ ಇಡಬೇಕೆಂದು ಜಿಲ್ಲಾ ತಂಬಾಕು ಸರ್ವೇಕ್ಷಣಾ ಅಧಿಕಾರಿ ಮಂಜುನಾಥ್ ಹೇಳಿದರು.

ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳ ಪೋಷಕರ ಸಭೆ ಮತ್ತು ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮದ ಕುರಿತು ಪೋಷಕರಿಗೆ ಆಯೋಜಿಸಲಾಗಿದ್ದ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ. ಮಾದಕ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿದರೆ ಮಾರಾಟಗಾರರು ಅದನ್ನು ಮಾರಲು ಮುಂದಾಗುವುದಿಲ್ಲ. ಕ್ರಮೇಣ ಅದರ ತಯಾರಿಕೆಯು ನಿಲ್ಲುತ್ತದೆ. ಪೋಷಕರು ಮಕ್ಕಳ ಎದುರಿನಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡಬಾರದು. ಮಕ್ಕಳು ಇದನ್ನೇ ಅನುಸರಿಸಿದರೆ ಇಡೀ ಸಮಾಜದ ವ್ಯವಸ್ಥೆ ಹಾಳಾಗುತ್ತದೆ ಎಂದರು.

ಮಾದಕ ವಸ್ತುಗಳ ಸೇವನೆಯ ಚಟವನ್ನು ಬಿಡಿಸಲು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪುನಶ್ಚೇತನ ಶಿಬಿರವನ್ನು ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಚಟಕ್ಕೆ ಬಿದ್ದವರು ಮತ್ತೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶಿಬಿರಕ್ಕೆ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಮತಾ, ಶಾಲಾ ಮುಖ್ಯ ಶಿಕ್ಷಕ ಯಶ್ವಂತ್ ಕುಮಾರ್, ಸಹ ಶಿಕ್ಷಕರು ಇದ್ದರು.