ವೀರಾಜಪೇಟೆ, ಆ. ೧೬: ಜನಸಾಮಾನ್ಯರ ಸೇವೆಯನ್ನು ಸಮರ್ಪಕವಾಗಿ ಮಾಡದೆ ದೂರುಗಳು ಬಂದರೆ ವರ್ಗಾವಣೆ ಮಾತ್ರ ಶಿಕ್ಷೆ ಅಲ್ಲ. ಸೇವೆಯಿಂದಲೇ ಅಮಾನತು ಮಾಡುವ ಹೆಜ್ಜೆ ಇಡಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರಿ ನೌಕರರಿಗೆ ಉಸ್ತುವಾರಿ ಸಚಿವ ಬೋಸರಾಜ್ ಹೇಳಿದರು.
ವೀರಾಜಪೇಟೆಯ ಪುರಭವನದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಅನುಭವಿಸಲು ಸಿದ್ಧರಾಗಬೇಕು. ಟ್ರಾನ್ಸ÷್ಫರ್ ಮಾಡಿದರೆ ಮತ್ತೊಂದು ಕಡೆ ಇದೇ ರೀತಿಯ ತಪುö್ಪಗಳು ಮಾಡುವುದರಿಂದ ತಾವು ಸೇವೆ ಸಲ್ಲಿಸುವ ಕ್ಷೇತ್ರದಲ್ಲಿ ಮತ್ತೆ ಪುನಃ ಜನಸಾಮಾನ್ಯರಿಗೆ ಕಷ್ಟ ನಷ್ಟಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಎಲ್ಲಾ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲಾ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಭಾವ ಬಳಸಿಕೊಂಡು ವರ್ಗಾವಣೆ ತೆಗೆದುಕೊಂಡು ಹೋಗುವ ಅಧಿಕಾರಿಗಳನ್ನು ಕಳುಹಿಸಬಾರದು. ಅವರ ಸ್ಥಾನಕ್ಕೆ ಮತ್ತೊಬ್ಬರು ನಿಯುಕ್ತಿ ಆಗುವವರೆಗೂ ವರ್ಗಾವಣೆಯನ್ನು ತಡೆಹಿಡಿಯಬೇಕು, ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿಗಳಿಲ್ಲದೆ ವಿಪರೀತವಾದ ಹೊರೆ ಆಡಳಿತದ ಮೇಲೆ ಬೀಳುತ್ತದೆ ಎಂದು ಸಚಿವರು ಸೂಚಿಸಿದರು.
ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಮಾಹಿತಿ ನೀಡಿ ವೀರಾಜಪೇಟೆ ತಾಲೂಕಿನಲ್ಲಿ ೧೭೭ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಖಾಲಿ ಇರುವ ಶಿಕ್ಷಕರ ಸ್ಥಾನಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ವೆಂಕಟ್‌ರಾಜ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವಾಗ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಸಿಗುತ್ತಾರೆಯೇ ಎಂದು ಪ್ರಶ್ನೆ ಮಾಡಿದರು. ಅನುದಾನಿತ ಖಾಸಗಿ ಶಾಲೆಯಲ್ಲಿ ಶಿಕ್ಷಕರ ನೇಮಖಾತಿಗಳು ಯಾಕಾಗಿ ನಡೆದಿಲ್ಲ. ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಅಷ್ಟು ಹುದ್ದೆಗಳು ಖಾಲಿಯಿರುವುದರ ಸಮಗ್ರ ಮಾಹಿತಿ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರಿಗೆ ನೀಡುವಂತೆ ಶಾಸಕ ಎ.ಎಸ್ ಪೊನ್ನಣ್ಣ ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಎಂಟು ಮಂದಿ ತಜ್ಞವೈದ್ಯರ ಕೊರತೆಯಿದೆ. ಇಡೀ ಜಿಲ್ಲೆಗೆ ಒಬ್ಬರೇ ಒಬ್ಬರು ಅನಸ್ತೇಶಿಯಾ ವೈದ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೧.೩೦ ಆದರೂ ವೈದ್ಯರಿಲ್ಲದ ಬಗ್ಗೆ ವರದಿ ಬಿತ್ತರವಾದ ಬಗ್ಗೆ ಪ್ರಶ್ನೆ ಮಾಡಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹೇಮಾಪ್ರಿಯ ಶಾಸಕರಿಗೆ ಉತ್ತರಿಸುತ್ತಾ ಕರ್ತವ್ಯದಲ್ಲಿರುವ ವೈದ್ಯರು ಐಸಿಯುಗೆ ಹೋಗಿ, ದೈನಂದಿನ ರೌಂಡ್ಸ್ ಮುಗಿಸಿ ಬರುವಾಗ ಸ್ವಲ್ಪ ತಡವಾಗಿದೆ ಎಂದರು. ಅದಕ್ಕೆ ಶಾಸಕರು ರೋಗಿಗಳನ್ನು ಹೆಚ್ಚು ಹೊತ್ತು ಕಾಯಿಸದೆ ಸೂಕ್ತ ಸಮಯಕ್ಕೆ ಅವರಿಗೆ ಚಿಕಿತ್ಸೆ ನೀಡಬೇಕು ಇಂಥ ಘಟನೆಗಳು ಮರುಕಳಿಸಬಾರದು ಎಂದು ಸೂಚಿಸಿದರು.
ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಬರದ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳಿವೆ ಈ ಬಗ್ಗೆ ಏನು ಕ್ರಮ ಜರುಗಿಸಿದ್ದೀರಿ ಎಂದು ಶಾಸಕ ಪೊನ್ನಣ್ಣ ಮಾಹಿತಿ ಬಯಿಸಿದರು. ಅವರಿಗೆ ಈಗಾಗಲೇ ಐದು ಬಾರಿ ನೋಟೀಸ್ ಜಾರಿ ಮಾಡಿದ್ದೇವೆ ಅವರ ನಿವೃತ್ತಿಗೆ ಇನ್ನೂ ಐದು ತಿಂಗಳು ಬಾಕಿಯಿದೆ ಎಂದರು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು.
ಇದಕ್ಕೆ ಶಾಸಕ ಪೊನ್ನಣ್ಣ, ಅವರ ಮೇಲೆ ತನಿಖೆ ಮಾಡಿ ಸರಿಯಾಗಿ ಸೇವೆ ಸಲ್ಲಿಸದಿದ್ದ ಮೇಲೆ ತನಿಖೆ ಎದುರಿಸಲಿ ಎಂದರು.
ಉಸ್ತುವಾರಿ ಸಚಿವ ಬೋಸರಾಜು, ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲೆಯಲ್ಲಿ ಇನ್ನೂ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬೇಕು, ತಜ್ಞ ವೈದ್ಯರು ಎಷ್ಟು ಬೇಕು, ಯಾವೆಲ್ಲಾ ಸೌಲಭ್ಯಗಳು ಬೇಕು ಎಂಬುದರ ಬಗ್ಗೆ ಒಂದು ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತನ್ನಿ. ಅತೀ ಶೀಘ್ರದಲ್ಲಿ ಆರೋಗ್ಯ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಪರಿಹಾರ ನೀಡುವ ಸಲಹೆ ನೀಡಿದರು.
ಇಷ್ಟು ವರ್ಷಗಳಾದರೂ ಶವಗಾರದಲ್ಲಿ ಫ್ರೀಜರ್ ಇಟ್ಟಿಲ್ಲದ ಬಗ್ಗೆ ಪ್ರಶ್ನೆ ಮಾಡಿದರು.
ಸಚಿವರು ಕುಡಿಯುವ ನೀರಿನ ಸಮಸ್ಯೆ ಹೇಗಿದೆ ತಾಲೂಕಿನಲ್ಲಿ ಎಂದು ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರನ್ನು ಪ್ರಶ್ನಿಸಿದರು. ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ ಎನ್ನುವ ಉತ್ತರ ಅವರಿಂದ ಬಂದಿತು. ಕೂಡಲೇ ಶಾಸಕ ಪೊನ್ನಣ್ಣ ತಿತಿಮತಿ ಪ್ರದೇಶದಲ್ಲಿ ಹಾಗೂ ಪೊನ್ನಂಪೇಟೆ ಬಳಿಯ ಗ್ರಾಮವೊಂದರಲ್ಲಿ ನೀರಿನ ಸಮಸ್ಯೆ ಏನಾಯ್ತು ಎಂದು ಮಾಹಿತಿ ಬಯಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ತಿತಿಮತಿ ಬಳಿಯ ಗೌರಿ ಕಾಲೋನಿಯಲ್ಲಿ ನೀರಿನ ಸಮಸ್ಯೆ ಕುರಿತು ಪ್ರಶ್ನೆ ಮಾಡಿದರು. ಇದಕ್ಕೆ ಸಂಬAಧಪಟ್ಟ ಅಭಿವೃದ್ಧಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶಾಸಕ ಎ.ಎಸ್. ಪೊನ್ನಣ್ಣ ಜಲ್ ಜೀವನ್ ಮಿಷನ್ ತಾಲೂಕಿನಾದ್ಯಂತ ಸಮಸ್ಯೆಗಳಾಗಿರುವುದರ ಕುರಿತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಬಳಿ ಪ್ರಶ್ನಿಸಿದರು. ಅಭಿಯಂತರರ ಉತ್ತರದಿಂದ ಸಮಧಾನಿತರಾಗದ ಉಸ್ತುವಾರಿ ಸಚಿವ ಬೋಸರಾಜು ಅವರು ಪ್ರತಿ ಅಧಿಕಾರಿಗಳು, ಇಒ, ಸಿಇಒ ಎಲ್ಲರೂ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಬೇಕು, ಜಲ್ ಜೀವನ್ ಮಿಷನ್ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಿದರು.
ಸರ್ವೇ ಇಲಾಖೆ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು, ಕಡತಗಳು ವಿಲೇವಾರಿ ಆಗದ ಬಗ್ಗೆ ಸಚಿವರು ಹಾಗೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಚೆಸ್ಕಾಂ ಇಲಾಖೆಯಿಂದ ಕೆಲಸಗಳು ಸಮರ್ಪಕವಾಗಿಲ್ಲದ ಬಗ್ಗೆ ಅಸಮಧಾನ ಹೊರಹಾಕಿದರು. ಇನ್ನು ಮುಂದೆ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿಧಾನಸಭಾ ಕೇತ್ರವಾರು ಮಡಿಕೇರಿ ಹಾಗೂ ವೀರಾಜಪೇಟೆ ಎರಡು ಕಡೆಯೂ ಪ್ರಗತಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವರ್ಣೀತ್ ನೇಗಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.