ಮಡಿಕೇರಿ, ಆ. ೧೬: ವಿವಿಧತೆಯಲ್ಲಿ ಏಕತೆಯನ್ನು ಸಾರಿರುವ ಭಾರತ ವಿಶ್ವದಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ.

ಜಾತ್ಯಾತೀತತೆ ಭಾರತದ ಧರ್ಮ ಎಂಬ ಘೋಷಣೆಯೊಂದಿಗೆ ಜಾತ್ಯಾತೀತಯನ್ನು ಉಳಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ರಾಷ್ಟç ರಕ್ಷಾ ಸಂಗಮ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಜಿಲ್ಲಾ ಸಹಾಯಕ ಖಾಝಿ ಎಂ.ಎA ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ೭೭ನೇ ಸ್ವಾತಂತ್ರ‍್ಯೋತ್ಸವ ಆಚರಣೆ ಸಂದರ್ಭದಲ್ಲಿ ಇಂದಿಗೂ ಗ್ರಾಮೀಣ ಭಾಗದ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ನಮ್ಮ ಚಿಂತನೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ನಾವೆಲ್ಲರೂ ಮುಂದಾಗಬೇಕಾಗಿದೆ. ಪ್ರತಿಯೊಬ್ಬರ ಆಶಯದಂತೆ ಅಭಿವೃದ್ಧಿಯ ಮೂಲಕ ಭವಿಷ್ಯ ರೂಪಿಸಿಕೊಂಡಲ್ಲಿ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ ಎಂದರು.

ಚೆಟ್ಟಳ್ಳಿ ಚರ್ಚ್ನ ಧರ್ಮಗುರು ಜೆರಾಲ್ಡ್ ಸಿಕ್ವೇರಾ ಮಾತನಾಡಿ, ಮನುಷ್ಯತ್ವ ಇಲ್ಲದ ಜೀವನ ಪ್ರಾಣಿಯ ಜೀವನವಾಗುತ್ತೆ ಪ್ರೀತಿಯಿಲ್ಲದ ಜೀವನ ದ್ರೋಹದ ಜೀವನವಾಗಲಿದೆ. ಧರ್ಮದ ಆಚರಣೆಯಲ್ಲಿ ಮನುಷ್ಯತ್ವ ಇರಬೇಕಾಗಿದ್ದು ಹಾಡುವ ಮಾತುಗಳು ಮುತ್ತಿನಂತಿರಬೇಕಾಗಿದೆ.

ಶಾAತಿಯ ದಾರಿ ಪ್ರೀತಿಯನ್ನು ಹಂಚಿ ಸೌಹಾರ್ದ ಜೀವನ ನಡೆಸಲು ಇಂತಹ ಜಾತ್ಯಾತೀತತೆಯ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ. ಭಾರತ ಸಂವಿಧಾನ ಎಲ್ಲರನ್ನ ಒಟ್ಟಗೂಡುವುದಕ್ಕೆ ಸಮಾನತೆ ನೀಡುತ್ತಿದೆ. ಅದರಿಂದಲೇ ನಾವೆಲ್ಲರೂ ಶಾಂತಿ ಸಹ ಬಾಳ್ವೆಯೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ.

ಸಕಲೇಶಪುರ ಆನೆಮಹಲ್ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಭವ್ಯ ಭಾರತ ದೇಶವನ್ನು ಕಟ್ಟಲು ಎಲ್ಲಾ ಮಹಾತ್ಮರು ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊAದಿಗೆ ಭಾರತ ದೇಶ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡಗಳು ಇಂದಿಗೂ ವಿಶ್ವದಲ್ಲೇ ಗಮನ ಸೆಳೆಯುತ್ತಿವೆ. ದೇಶದಲ್ಲಿರುವ ಪ್ರತಿಯೊಬ್ಬರ ಕೊಡುಗೆಗಳು ಅಪಾರವಾಗಿದ್ದು ಸುಸಂಸ್ಕೃತ ಭಾರತ ದೇಶದಲ್ಲಿ ನಾವೆಲ್ಲರೂ ಸೌಹಾರ್ದ ಜೀವನ ನಡೆಸುವಂತಾಗಿದೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಲವಾರು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯೊಂದಿಗೆ ಮುಖ್ಯ ವಾಹಿನಿಗೆ ತರಲು ಸರ್ಕಾರ ಮುಂದಾಗಿದ್ದು ಜನಪರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದರು.

ಎಸ್‌ವೈಎಸ್ ಜಿಲ್ಲಾಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿದರು.

ಜಾತ್ಯಾತೀತತೆಯ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ ಚೋಕಂಡಳ್ಳಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಾಜಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರು ಯಾಕೂಬ್ ಬಜೆಗುಂಡಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ತಮ್ಲೀಕ್ ದಾರಿಮಿ, ಸಮಸ್ತ ಜಂಇಯ್ಯತುಲ್ ಉಲಮ ಪ್ರಧಾನ ಕಾರ್ಯದರ್ಶಿ, ಎ.ಸಿ. ಉಸ್ಮಾನ್ ಫೈಝಿ, ಸುನ್ನಿ ಮಹಲ್ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ. ಹಮಿದ್ ಮೌಲವಿ ಸುಂಟಿಕೊಪ್ಪ, ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿ ಎಂ.ವೈ. ಅಶ್ರಫ್ ಫೈಝಿ, ಎಸ್‌ವೈಎಸ್ ಆಮಿಲ ಜಿಲ್ಲಾ ಸಮಿತಿ ಅಧ್ಯಕ್ಷ ಹಾರಿಸ್ ಕಡಂಗ, ಅಬ್ದುಲ್ ರೆಹಮಾನ್ ಬಾಪು ಸೇರಿದಂತೆ ಮತ್ತಿತರರು ಹಾಜರಿದ್ದರು.

-ಎಸ್.ಎಂ ಮುಬಾರಕ್