ಪೊನ್ನಂಪೇಟೆ, ಆ. ೧೬: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ಪೋಷಕ ಮತ್ತು ಶಿಕ್ಷಕರ ಸಭೆಯನ್ನು ಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಎಸ್ಡಿಎಂಸಿ ಅಧ್ಯಕ್ಷ ಸಿ.ಎ. ಜುನೈದ್ ಮಾತನಾಡಿ, ಪೋಷಕರು ವಿದ್ಯಾರ್ಥಿಗಳ ಸ್ವಚ್ಛತೆಯ ಕಡೆಗೆ ಗಮನ ನೀಡಬೇಕು. ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿನಿತ್ಯ ಮಕ್ಕಳ ಬ್ಯಾಗ್ನಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುವುದರ ಜೊತೆಗೆ ಮಕ್ಕಳ ಚಲನವಲನಗಳ ಬಗ್ಗೆ ಗಮನವಿಡಬೇಕು.
ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದನ್ನು ಕಡಿಮೆ ಮಾಡಿ, ತಮ್ಮ ಮಕ್ಕಳ ಎದುರು ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನಿಂದಿಸುವ ಕೆಲಸ ಮಾಡಬೇಡಿ ಎಂದರು. ಶಿಕ್ಷಕರು ಕೂಡ ತಮ್ಮ ವೃತ್ತಿಗೆ ಕಳಂಕ ಬರದ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಶ್ರಮಿಸಬೇಕು ಎಂದರು. ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಮಾತನಾಡಿ, ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಸಭೆಗೆ ಬರುವ ರೂಢಿ ಮಾಡಿಕೊಳ್ಳಬೇಕು. ಶಾಲೆಯ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಬೇಕು.
ಮಕ್ಕಳು ಮನೆಯಲ್ಲಿ ಓದು, ಬರಹದ ಕಡೆ ಗಮನ ಹರಿಸುವಂತಹ ವಾತಾವರಣ ನಿರ್ಮಿಸಿಕೊಡಬೇಕು ಎಂದರು. ಶಿಕ್ಷಕರು ವೈಯಕ್ತಿಕವಾಗಿ ಎಷ್ಟೇ ಒತ್ತಡಗಳಿದ್ದರೂ, ಅದನೆಲ್ಲ ಬದಿಗಿಟ್ಟು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ಬೋಧನೆ ಮಾಡಬೇಕು. ಕರ್ತವ್ಯಕ್ಕೆ ಲೋಪ ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಪೋಷಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಸಲಹೆ ನೀಡಿದರು.
ಗ್ರಾ.ಪಂ. ಸದಸ್ಯ ರಾಮಕೃಷ್ಣ, ಎಸ್ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಸುಮಿತ್ರ, ಲತಾ, ಸುಜಾತ, ಸುಜಿನ, ಮಂಜು ಶಿಲ್ಪಾ, ಶಿಕ್ಷಕರಾದ ಐ.ಎಂ. ರೋಸಿ, ಮಂಗಳಾAಗಿ, ಝಾನ್ಸಿ, ಶಕೀಲ ಭಾನು, ಮಹೇಶ್, ಅಜಿತ, ಸುನೀತ, ಸುದೀಕ್ಷ, ಶಿಲ್ಪ, ಪೋಷಕರು, ಎಸ್ಡಿಎಂಸಿ ಸದಸ್ಯರು ಹಾಜರಿದ್ದರು. ಮುಖ್ಯ ಶಿಕ್ಷಕ ವಿಜಯ್ ಸ್ವಾಗತಿಸಿ, ದೈಹಿಕ ಶಿಕ್ಷಕ ಟಿ.ಎಸ್. ಮಹೇಶ್ ವಂದಿಸಿ ನಿರೂಪಿಸಿದರು.