ಮಡಿಕೇರಿ, ಆ. ೧೫: ಕೊಡಗು ಪ್ರವಾಸಿಗರ ಸ್ವರ್ಗದ ಬೀಡು. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತಗಳನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಆದರೆ ಜಲಪಾತಗಳ ಪಕ್ಕದಲ್ಲೇ ಇರುವ ಬಂಡೆ ಕಲ್ಲುಗಳ ಮೇಲೆ ನಿಂತು ಸೆಲ್ಫಿ ಹಾಗೂ ರೀಲ್ಸ್ ಮಾಡುವ ಗೀಳಿಗೆ ಸಿಲುಕಿ ಜಲಪಾತಗಳಿಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.

ಇತ್ತೀಚೆಗಷ್ಟೇ ಕುಶಾಲನಗರ ಸಮೀಪವಿರುವ ಹಾರಂಗಿ ಜಲಾಶಯ ವೀಕ್ಷಿಸಲು ರಾಜಧಾನಿ ಬೆಂಗಳೂರಿನಿAದ ಬಂದ ಪ್ರವಾಸಿಗರ ತಂಡದಲ್ಲಿ ಒಬ್ಬ ಹಾರಂಗಿ ಜಲಾಶಯದ ಬಳಿ ಇರುವ, ಸೇತುವೆಯಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಪ್ರವಾಸಿಗರ ಸೆಲ್ಫಿ ಗೀಳಿಗೆ ಪ್ರತಿವರ್ಷ ಜಲಪಾತಗಳು, ನದಿ ತೊರೆಗಳು ಮಾನವ ಬಲಿಯನ್ನು ಪಡೆಯುತ್ತಿದ್ದರೂ ಕೂಡ, ಪ್ರವಾಸಿಗರು ಎಚ್ಚೆತ್ತುಕೊಳ್ಳದೇ ಹುಚ್ಚಾಟ ಮೆರೆಯುತ್ತಿದ್ದಾರೆ.

ಪ್ರವಾಸಿ ತಾಣಗಳು, ಜಲಪಾತಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳ ನಿಯಮಗಳನ್ನು ಗಾಳಿಗೆ ತೂರಿ ಜಲಪಾತಗಳಲ್ಲಿ ತಾವು ನಡೆದದ್ದೇ ದಾರಿ ಎಂಬAತೆ ಹುಚ್ಚಾಟ ಮೆರೆಯುವ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಅತೀ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಜಲಪಾತಗಳು ಇವೆ. ಜಲಪಾತಗಳನ್ನು ವೀಕ್ಷಿಸಿ ಪ್ರಕೃತಿ ಸೌಂದರ್ಯವನ್ನು ಆನಂದಿಸಿದರೆ ತೊಂದರೆಯಿಲ್ಲ. ಆದರೆ ಜಾರುವ ಬಂಡೆ ಕಲ್ಲುಗಳ ಮೇಲೆ ನಿಂತು, ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಜಿಲ್ಲೆಯ ಪ್ರಸಿದ್ಧ ಜಲಪಾತಗಳಾದ ಮಲ್ಲಳ್ಳಿ, ಚೇಲಾವರ, ಅಬ್ಬಿಫಾಲ್ಸ್, ಕೋಟೆ ಅಬ್ಬಿ ಜಲಪಾತಗಳಲ್ಲಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಮೃತ್ಯುಕೂಪವಾಗುತ್ತಿರುವ ಜಲಪಾತಗಳು

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಮಲ್ಲಳ್ಳಿ ಜಲಪಾತದಲ್ಲಿ ೨೦೦೧ ರಿಂದ ಇದುವರೆಗೆ ೧೨ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಮಲ್ಲಳ್ಳಿ ಜಲಪಾತದ ಬಗ್ಗೆ ಪ್ರಚಾರವಿರಲಿಲ್ಲ.

ಈ ಸಮಯದಲ್ಲಿ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಸೋಮವಾರಪೇಟೆ ತಾಲೂಕಿನ ಬಾಣವಾರ ಸಮೀಪದ ರಾಗಿಣಿ ಎಂಬ ಯುವತಿ ತನ್ನ ಗೆಳತಿಯೊಂದಿಗೆ ಫೋಟೋ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಳು.

ತನ್ನ ಗೆಳತಿ ಜಾರಿ ಬೀಳುವುದನ್ನು ಕಣ್ಣೆದುರಲ್ಲೇ ಕಂಡ ಗೆಳತಿ ಅವಳು ಕೂಡ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಇದು ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಿದ ಮೊದಲ ಸಾವು. ಜಲಪಾತಗಳಿಗೆ ಪ್ರವೇಶಿಸುವ ದ್ವಾರದಲ್ಲೇ ಹಲವಾರು ಎಚ್ಚರಿಕೆ ಫಲಕಗಳು, ಪ್ರವಾಸಿಗರು ನೀರಿಗಿಳಿಯದಂತೆ ಮೆಶ್ ಅಳವಡಿಸಿ, ಹೋಂಗಾರ್ಡ್ಗಳನ್ನು ಪ್ರವಾಸೋದ್ಯಮ ಇಲಾಖೆ ನೇಮಕ ಮಾಡಿದರೂ ಸಹ ಇವರ ಕಣ್ತಪ್ಪಿಸಿ ಪ್ರವಾಸಿಗರು ಜಲಪಾತದ ಪಕ್ಕದಲ್ಲೇ ಇರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಮುಂದಾಗಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಅದಲ್ಲದೆ ನೀರಿಗಿಳಿಯುವ ದುಸ್ಸಾಹಸಕ್ಕೂ ಕೈ ಹಾಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

೨೦೨೨ ಮೇ ೨೯ರಂದು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ಮೂಲದ ಮೂವರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದರು.

ಕೊಡಗು ಜಿಲ್ಲೆಯ ಪ್ರವಾಸಿ ತಾಣ ಮುಕ್ಕೋಡ್ಲುವಿನ ಕೋಟೆ ಅಬ್ಬಿ ಜಲಪಾತದಲ್ಲಿ ಈ ಘಟನೆ ನಡೆದಿತ್ತು. ಮೋಜಿಗಾಗಿ ನೀರಿಗಿಳಿಯುವ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಕಳೆದ ವರ್ಷ ಏಪ್ರಿಲ್ ೨೬ ರಂದು ಪ್ರವಾಸಕ್ಕೆಂದು ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಬಾಲಕನೋರ್ವ ಕಾವೇರಿ ನದಿಯಲ್ಲಿ ಕಾಲು ಜಾರಿ ಮುಳುಗಿ ಬಿದ್ದ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ನಡೆದಿತ್ತು. ಜಲಪಾತಗಳಲ್ಲಿ ಸೆಲ್ಫೀ, ರೀಲ್ಸ್ ಗೀಳಿಗೆ ಪ್ರವಾಸಿಗರು ಪ್ರಾಣ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ