ಮಡಿಕೇರಿ ಆ. ೧೫: ಮಡಿಕೇರಿ ತಾಲೂಕಿನ ಮೇಕೇರಿ ಗ್ರಾ.ಪಂ.ಗೆ ಸ್ವಂತ ಕಟ್ಟಡವಿಲ್ಲದೆ ಸಾರ್ವಜನಿಕರ ಕೆಲಸಗಳಿಗೆ ಅಡಚಣೆಯಾಗು ತ್ತಿರುವುದರಿಂದ ತಕ್ಷಣ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ ಸದಸ್ಯರುಗಳಾದ ಅಬ್ದುಲ್ ಖಾದರ್, ಎಂ.ಯು.ಹನೀಫ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಾಯ್ತಿ ಸದಸ್ಯರು, ಸುಮಾರು ೭ ವರ್ಷಗಳ ಹಿಂದೆ ಹಾಕತ್ತೂರು ಗ್ರಾ.ಪಂ ಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ರಚನೆಯಾದ ಮೇಕೇರಿ ಗ್ರಾ.ಪಂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಕೊಠಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಪಂಚಾಯ್ತಿಗೆ ಸ್ವಂತ ಕಟ್ಟಡದ ಅಗತ್ಯವಿದೆ ಎಂದರು.

ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇದರ ಬಳಿಯೇ ಗ್ರಾ.ಪಂ ಕಟ್ಟಡ ನಿರ್ಮಾಣ ಮಾಡಬೇಕೆನ್ನುವ ಅಭಿಲಾಷೆ ಎಲ್ಲಾ ಗ್ರಾಮಸ್ಥರದ್ದಾಗಿದೆ. ಈ ಹಿನ್ನೆಲೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು.

ಇತ್ತೀಚೆಗೆ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಜಿ.ಪಂ ವತಿಯಿಂದ ಯೋಗ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಲ್ಲಿ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಜಾಗವಿದ್ದರೂ ಯೋಜನೆ ವಿಳಂಬವಾಗುತ್ತಿದೆ. ಆದ್ದರಿಂದ ಆಡಳಿತ ವ್ಯವಸ್ಥೆ ಗ್ರಾ.ಪಂ ಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಬ್ದುಲ್ ಖಾದರ್ ಹಾಗೂ ಎಂ.ಯು.ಹನೀಫ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ರಾಜೀವ ಲೋಚನ ಬಿ.ಪಿ ಹಾಗೂ ನಿತಿನ್ ಓಡಿಯನ ಉಪಸ್ಥಿತರಿದ್ದರು.