ಸೋಮವಾರಪೇಟೆ, ಆ. ೧೪: ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪಿದರೆ ಮಾತ್ರ ಫಲಪ್ರದವಾಗುತ್ತದೆ. ಜನರ ತೆರಿಗೆ ಹಣದಿಂದಲೇ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಕಾರ್ಯಕ್ರಮಗಳ ಜಾರಿಯಲ್ಲಿ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲ ರಾಗಿರಬೇಕು. ಒಂದು ವೇಳೆ ನಿರ್ಲಕ್ಷö್ಯ ಕಂಡುಬAದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಂದಾಯ ಇಲಾಖೆ ಹಾಗೂ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಹೆಚ್ಚು ಒತ್ತು ನೀಡಿದರು.
ಜನರ ತೆರಿಗೆ ಹಣ ಯಾವುದೇ ಕಾರಣಕ್ಕೂ ಪೋಲಾಗಬಾರದು. ಜನಸಾಮಾನ್ಯರ
(ಮೊದಲ ಪುಟದಿಂದ) ಕೆಲಸ ಕಾರ್ಯಗಳು ವಿಳಂಬವಾಗಬಾರದು. ಅಧಿಕಾರಿಗಳು ಆಗಾಗ್ಗೆ ತಮ್ಮ ಇಲಾಖೆಯ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುತ್ತಿರಬೇಕು. ಯಾವುದೇ ಸಮಸ್ಯೆಗಳು, ಬೇಕು-ಬೇಡಿಕೆಗಳಿದ್ದರೆ ಸರ್ಕಾರದ ಗಮನಕ್ಕೆ ತರಬೇಕು. ಎಲ್ಲವೂ ಸರಿಯಿದೆ ಎಂದು ಕಣ್ಣೊರೆಸುವ ವರದಿಗಳನ್ನು ನೀಡಬಾರದು. ನಾವುಗಳೂ ಸಹ ಗ್ರಾಮಮಟ್ಟದಲ್ಲಿ ಭೇಟಿ ನೀಡುತ್ತೇವೆ. ಒಂದು ವೇಳೆ ಅಧಿಕಾರಿಗಳು ನೀಡಿದ ವರದಿ ಹಾಗೂ ವಾಸ್ತವತೆಯಲ್ಲಿ ವ್ಯತ್ಯಾಸವಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವರು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆಯಲ್ಲಿ ೯೫೫ ಅರ್ಜಿ ಬಾಕಿ: ಸಭೆಯ ಆರಂಭದಲ್ಲಿಯೇ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮುಂದಾದ ಸಚಿವರು, ೯೪ ಸಿ ಹಾಗೂ ೯೪ಸಿಸಿ ಅಡಿಯಲ್ಲಿ ೯೫೫ ಅರ್ಜಿಗಳು ಉಳಿಕೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಉತ್ತರಿಸಿದ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಹೇಮಾವತಿ ಹಿನ್ನೀರು ಮುಳುಗಡೆ ಸಂತ್ರಸ್ಥರಿಗೆ ಮೀಸಲಿರಿಸಿರುವ ಸ್ಥಳ, ಅರ್ಬನ್ ಸರ್ವೆ ಸೇರಿದಂತೆ ಕೊಡಗಿನಲ್ಲಿ ಕಂದಾಯ ಭೂಮಿಗೆ ಸಂಬAಧಿಸಿದAತೆ ಕೆಲವೊಂದು ನಿರ್ಬಂಧಗಳಿರುವುದರಿAದ ಅರ್ಜಿಗಳು ಉಳಿಕೆಯಾಗಿವೆ ಎಂದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂಥರ್ಗೌಡ, ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ರೈತರಿಗೆ ಯಾವುದೇ ಹಿಂಬರಹ ನೀಡುತ್ತಿಲ್ಲ. ಇದರಿಂದಾಗಿ ರೈತರು ಅಲೆದಾಡುತ್ತಿದ್ದಾರೆ. ದಾಖಲೆಗಳನ್ನು ಕಂದಾಯ ಇಲಾಖೆಯೇ ನೀಡಬೇಕಿದ್ದರೂ, ರೈತರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಉಳಿಕೆಯಾಗಿರುವ ಅರ್ಜಿಗಳನ್ನು ವಿಂಗಡಣೆ ಮಾಡಿ, ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇವರ ಮಾಹಿತಿಯನ್ನು ಕಚೇರಿ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರಿಗೆ ಸೂಚಿಸಿದರು.
ಮುಂದಿನ ಸಭೆಯೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಡಿ.ಸಿ. ಎ.ಸಿ., ತಹಶೀಲ್ದಾರ್ಗಿಂತಲೂ ಮಧ್ಯವರ್ತಿಗಳೇ ಮುಖ್ಯವಾಗಿದ್ದಾರೆ. ಈ ದಂಧೆಗೆ ಕಡಿವಾಣ ಹಾಕಬೇಕಿದೆ. ಇಂತಹ ದಂಧೆಗೆ ಮುಂದೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಮಂಥರ್ಗೌಡ ಹೇಳಿದರು.
ಫಾರಂ ೫೦ ಹಾಗೂ ೫೩ ಅರ್ಜಿ ಸಲ್ಲಿಕೆ ಮುಗಿದಿದೆ. ೫೭ ಪ್ರಗತಿಯಲ್ಲಿದೆ. ೯೪ ಸಿ.ಸಿ. ಅಡಿಯಲ್ಲಿ ೪೬ ಅರ್ಜಿಗಳು ಬಾಕಿಯಿವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಸರ್ಕಾರದ ಆದೇಶ ಬಂದ ತಕ್ಷಣ ಅಕ್ರಮ ಸಕ್ರಮ ಸಮಿತಿ ರಚನೆ ಮಾಡಲಾಗುವುದು. ರೈತರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು ಎಂದು ಸಚಿವರು ಸೂಚಿಸಿದರು.
ಕೊಡಗಿನಲ್ಲಿ ಭೂ ದಾಖಲೆಗೆ ಸಂಬAಧಿಸಿದAತೆ ಅನೇಕ ಸಮಸ್ಯೆಗಳಿವೆ. ಪೌತಿ ಖಾತೆ ಆಂದೋಲನಕ್ಕೂ ಇದು ತೊಡಕಾಗಿವೆ. ಕಂದಾಯ ಇಲಾಖಾ ಸಚಿವರ ಉಪಸ್ಥಿತಿಯಲ್ಲಿ ವಿಶೇಷ ಸಭೆ ಕರೆದು ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಭೆಯ ಗಮನಕ್ಕೆ ತಂದರು.
೨೦,೪೫೦ ಕುಟುಂಬಗಳಿಗೆ ಅನ್ನಭಾಗ್ಯದ ಹಣ: ತಾಲೂಕಿನಲ್ಲಿ ೨೮,೯೭೯ ಪಡಿತರ ಚೀಟಿದಾರರಿದ್ದಾರೆ. ೧೩೪೪ ಅಂತ್ಯೋದಯ, ೨೩,೨೧೭ ಬಿಪಿಎಲ್ ಕುಟುಂಬ, ೪೪೧೮ ಎಪಿಎಲ್ ಕುಟುಂಬಗಳಿವೆ. ೨೩,೯೪೬ ಕುಟುಂಬಗಳು ಅನ್ನಭಾಗ್ಯ ಯೋಜನೆಯಡಿ ಅರ್ಹತೆ ಹೊಂದಿವೆ. ಇದರಲ್ಲಿ ೨೦,೪೫೦ ಕುಟುಂಬಗಳಿಗೆ ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿದೆ. ೩೪೯೬ ಬಿಪಿಎಲ್ ಕಾರ್ಡ್ಗಳಿಗೆ ಡಿಬಿಡಿ ಮೂಲಕ ಹಣ ಪಾವತಿಗೆ ಬ್ಯಾಂಕ್ ಖಾತೆಯ ಆಧಾರ್ ಇಕೆವೈಸಿ ಸಮಸ್ಯೆಯಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಅವರು ಸಭೆಗೆ ತಿಳಿಸಿದರು.
ಇದರಲ್ಲಿ ೧೫೭೩ ಕುಟುಂಬಗಳ ಖಾತೆ ಸಕ್ರಿಯಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಅಂಚೆ ಕಚೇರಿಯಲ್ಲಿ ಖಾತೆ ತೆರೆಸಲಾಗಿದೆ. ಇನ್ನೂ ೧೯೨೩ ಪಡಿತರ ಚೀಟಿಗಳ ಪೈಕಿ ಹಲವರು ಬ್ಯಾಂಕ್ಗಳಲ್ಲಿ ಇಕೆವೈಸಿ ಮಾಡಿಸಿದ್ದಾರೆ. ಆಗಸ್ಟ್ ತಿಂಗಳ ಡಿಬಿಟಿ ನಂತರ ಉಳಿಕೆ ಮಾಹಿತಿ ಸಿಗಲಿದೆ ಎಂದರು.
ಈ ತಿಂಗಳ ಅಂತ್ಯದೊಳಗೆ ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೂ ಇಕೆವೈಸಿ ಆಗಿರಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಹಣ ಖಾತೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಬೋಸರಾಜು ಅವರು ನಿರ್ದೇಶಿಸಿದರು.
ಆಹಾರ ಇಲಾಖೆಯ ಅಧಿಕಾರಿಗಳು ಪ್ರತಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಆಹಾರ ಧಾನ್ಯದ ಗುಣಮಟ್ಟ, ತೂಕ ಮತ್ತು ಅಳತೆಯನ್ನು ಪರಿಶೀಲನೆ ನಡೆಸಬೇಕು. ಗೋದಾಮುಗಳಿಗೆ ಭೇಟಿ ನೀಡಬೇಕು. ಜನರ ತೆರಿಗೆ ಹಣ ತಂದು ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಯಾರೋ ನಾಲ್ಕು ಮಂದಿಗೆ ಲಾಭ ಆಗಬಾರದು ಎಂದರು.
ಜೆಜೆಎAನಲ್ಲಿ ೫೦ ಕಾಮಗಾರಿ ಪ್ರಗತಿ: ಜಲಜೀವನ್ ಮಿಷನ್ ಯೋಜನೆಯಡಿ ೧೯೧ ಕಾಮಗಾರಿಗಳ ಪೈಕಿ ೧೪೧ ಕಾಮಗಾರಿ ಮುಕ್ತಾಯಗೊಂಡಿವೆ. ೫೦ ಪ್ರಗತಿಯಲ್ಲಿವೆ. ಎಲ್ಲಾ ಕಾಮಗಾರಿಗಳಿಗೂ ಟೆಂಡರ್ ಆಗಿದೆ ಎಂದು ಅಭಿಯಂತರ ಟಿ.ಪಿ. ವೀರೇಂದ್ರ ತಿಳಿಸಿದರು. ಜಲಜೀವನ್ ಮಿಷನ್ ಯೋಜನೆಯು ಅವೈಜ್ಞಾನಿಕವಾಗಿ ನಡೆದಿದೆ. ನೀರಿನ ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಹುಗ್ರಾಮ ಯೋಜನೆಯಡಿ ಅನುಷ್ಠಾನ ಮಾಡಿದ್ದರೆ ಉಪಯೋಗ ಆಗುತ್ತಿತ್ತು ಎಂದು ಶಾಸಕ ಮಂಥರ್ ಗೌಡ ಹೇಳಿದರು.
ಕುಶಾಲನಗರ ತಾಲೂಕು ವಿಂಗಡೆಯಾದ ನಂತರ ಹಲವಷ್ಟು ಇಲಾಖೆಗಳಲ್ಲಿ ದಾಖಲೆಗಳು ವಿಂಗಡೆಯಾಗಿಲ್ಲ. ಸೋಮವಾರಪೇಟೆಯಲ್ಲಿಯೇ ಉಳಿದುಕೊಂಡಿದೆ. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗುತ್ತಿಲ್ಲ ಎಂದು ಶಾಸಕರು ಹೇಳಿದರು.
ತಾಲೂಕಿನಲ್ಲಿ ೩೯ ಗ್ರಾ.ಪಂ.ಗಳ ಪೈಕಿ ೩೨ ಅಭಿವೃದ್ಧಿ ಅಧಿಕಾರಿಗಳಿದ್ದಾರೆ. ಇದರಲ್ಲಿ ೮ ಮಂದಿಗೆ ವರ್ಗಾವಣೆಯಾಗಿದ್ದು, ಸದ್ಯ ತಡೆಯಾಜ್ಞೆ ಇರುವುದರಿಂದ ಇಲ್ಲಿಯೇ ಉಳಿದುಕೊಂಡಿದ್ದಾರೆ. ನೂತನ ಪಿಡಿಓಗಳನ್ನು ನಿಯೋಜಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ತಿಳಿಸಿದರು.
ಅರಣ್ಯ ಇಲಾಖೆ ವಿರುದ್ಧ ಗರಂ: ಹೊಸ್ಕೇರಿ ಸಮೀಪದ ಅರೆಕಾಡಿನಲ್ಲಿ ನಡೆದ ಕಾಡಾನೆ ದಾಳಿಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೇ ಮಾಹಿತಿ ಇರಲಿಲ್ಲ. ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ದುರಂತಗಳು ಸಂಭವಿಸುತ್ತಿವೆ. ನಿನ್ನೆಯೂ ಇದೇ ತಪ್ಪು ನಡೆದಿದೆ ಎಂದು ಶಾಸಕ ಮಂಥರ್ಗೌಡ ಅವರು ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ವಿರುದ್ಧ ಗರಂ ಆದರು.
ಕಳೆದ ೩ ತಿಂಗಳಲ್ಲಿ ೪೪ ವನ್ಯಪ್ರಾಣಿಗಳ ಹಾವಳಿ ಪ್ರಕರಣ ಸಂಭವಿಸಿದೆ. ಕಾಡಾನೆಗಳ ಹಾವಳಿ ತಡೆಗೆ ವಿಶೇಷ ಪ್ರಯತ್ನ ಆಗಲೇಬೇಕಿದೆ ಎಂದರು.
ತಾಲೂಕಿನಲ್ಲಿ ಭತ್ತ ಮತ್ತು ಮುಸುಕಿನ ಜೋಳ ಕೃಷಿ ಪ್ರಗತಿಯಲ್ಲಿದೆ. ರಸಗೊಬ್ಬರ ದಾಸ್ತಾನಿದೆ. ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ೭ ಏಕರೆ ಭತ್ತ ಹಾಗೂ ೧೦ ಏಕರೆ ಮುಸುಕಿನ ಜೋಳಕ್ಕೆ ಹಾನಿಯಾಗಿದೆ. ಹಾನಿಯ ಪ್ರಮಾಣ ಶೇ. ೧೦ರಿಂದ ೧೫ ಇದೆ ಎಂದು ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದರು.
ತಾಲೂಕಿನಲ್ಲಿ ೭೧೪ ಶಿಕ್ಷಕರ ಪೈಕಿ ೫೭೦ ಶಿಕ್ಷಕರಿದ್ದಾರೆ. ೧೧ ಮಂದಿ ವರ್ಗಾವಣೆಯಾಗಿದ್ದು, ಮೂವರು ನೇಮಕಗೊಂಡಿದ್ದಾರೆ. ೭೫ ಅತಿಥಿ ಶಿಕ್ಷಕರಿದ್ದಾರೆ ಎಂದು ಬಿಇಓ ಸುರೇಶ್ ಕೆ.ವಿ. ಮಾಹಿತಿ ನೀಡಿದರು. ಎಲ್ಲಾ ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಿ ಬಿಸಿಯೂಟ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲಿಸಬೇಕೆಂದು ಉಸ್ತುವಾರಿ ಸಚಿವರು ಸೂಚಿಸಿದರು.
೬೭ ಕಿ.ಮೀ. ಪಿಡಬ್ಲೂö್ಯಡಿಗೆ: ತಾಲೂಕಿನಲ್ಲಿ ೬೭ ಕಿ.ಮಿ. ರಸ್ತೆಯನ್ನು ಜಿಲ್ಲಾ ಪಂಚಾಯತ್ನಿAದ ಪಿಡಬ್ಲೂö್ಯಡಿಗೆ ನೀಡಲು ಕ್ರಮ ವಹಿಸಲಾಗಿದೆ. ಅಲ್ಲಿಯವರೆಗೆ ಜಿ.ಪಂ.ನಿAದಲೇ ನಿರ್ವಹಣೆಯಾಗಬೇಕು. ಗ್ರಾಮಗಳ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.
ಮಳೆಹಾನಿ ಪರಿಹಾರ ಕಾರ್ಯಗಳಿಗೆ ತಕ್ಷಣಕ್ಕೆ ೨೭ ಲಕ್ಷ ಹಾಗೂ ಶಾಶ್ವತ ಪರಿಹಾರಕ್ಕೆ ೪೨೦ ಲಕ್ಷ ವೆಚ್ಚದ ಯೋಜನೆಗಳಿಗೆ ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಇಇ ವೆಂಕಟೇಶ್ ನಾಯಕ್ ತಿಳಿಸಿದರು. ಕಕ್ಕೆಹೊಳೆ ಜಂಕ್ಷನ್ನಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ೧.೬೫ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಆಹಾರ ಇಲಾಖೆಯ ಉಪ ನಿರ್ದೇಶಕ ಹುದ್ದೆ ಖಾಲಿಯಿದೆ. ಪ್ರವಾಸೋದ್ಯಮ ಅಧಿಕಾರಿಯಿಲ್ಲ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಇಲ್ಲ ಎಂದು ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ತಾಲೂಕಿನಲ್ಲಿ ೧೩ ಪಿಹೆಚ್ಸಿ, ೨ ಸಿಎಸ್ಸಿ, ೧ ಜಿಹೆಚ್ಸಿ ಆಸ್ಪತ್ರೆಗಳಿದ್ದು, ೮ ವೈದ್ಯ ಹುದ್ದೆಗಳು ಖಾಲಿ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು. ಈ ತಿಂಗಳ ಅಂತ್ಯದೊಳಗೆ ಆರೋಗ್ಯ ಸಚಿವರು ಹಾಗೂ ಇಲಾಖಾ ಮುಖ್ಯ ಕಾರ್ಯದರ್ಶಿಗಳನ್ನು ಆಹ್ವಾನಿಸಿ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಉಪಸ್ಥಿತರಿದ್ದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.