ಸೋಮವಾರಪೇಟೆ, ಆ. ೧೫: ತಾಲೂಕಿನ ಅಬ್ಬೂರುಕಟ್ಟೆಯಿಂದ ಹಳೆಕೋಟೆ ರಸ್ತೆ ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಶಾಸಕ ಡಾ. ಮಂಥರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಅಬ್ಬೂರುಕಟ್ಟೆ ಮಾರ್ಗವಾಗಿ ಹಳೆÀಕೋಟೆ, ಹೆಬ್ಬಾಲೆಗೆ ತೆರಳುವ ರಸ್ತೆಗೆ ಅರ್ಧಕ್ಕೆ ಡಾಂಬರು ಹಾಕಿದ್ದು, ಉಳಿದ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಿದೆ. ಈ ರಸ್ತೆ ಕಾಮಗಾರಿ ಮುಂದುವರೆಸಲು ಅನುವು ಮಾಡಿಕೊಡಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಕಳೆದ ೬೦ ವರ್ಷಗಳಿಂದ ಅಬ್ಬೂರುಕಟ್ಟೆ, ನೇರುಗಳಲೆ, ಮೋರಿಕಲ್ಲು, ಬಸವನಳ್ಳಿ, ಆಡಿನಾಡೂರು, ಚಿನ್ನಳ್ಳಿ ಗಿರಿಜನ ಕಾಲೋನಿ ಗ್ರಾಮಗಳ ಜನರು ಈ ರಸ್ತೆಯನ್ನು ಬಳಸುತ್ತಿದ್ದರು. ಹೆಬ್ಬಾಲೆಗೆ ಸಮೀಪದ ರಸ್ತೆಯಾಗಿದ್ದು, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿತ್ತು.
ಹಿಂದೆ ನಾಲ್ಕಾರು ಖಾಸಗಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ೨೦೦೦ ಇಸವಿಯಲ್ಲಿ ೧೨ ಕಿ.ಮೀಟರ್ ರಸ್ತೆಗೆ ಡಾಂಬರನ್ನು ಹಾಕಲಾಗಿತ್ತು. ಉಳಿದ ೫ ಕಿ. ಮೀಟರ್ ರಸ್ತೆ ಮಾಡಲು ಅರಣ್ಯ ಇಲಾಖೆ ಅಡ್ಡಿಪಡಿಸಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗೇಟುಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ರಸ್ತೆ ಕಾಮಗಾರಿ ಮುಂದುವರೆಸಲು ಸಾಧ್ಯ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಅಭಿಯಂತರರು ಕೈಚೆಲ್ಲಿದ್ದಾರೆ ಎಂದು ಗ್ರಾಮದ ನಿವಾಸಿ ಅಣ್ಣಯ್ಯ ಅವರು ಶಾಸಕರು ಗಮನ ಸೆಳೆದರು.
ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲು ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ ರಸ್ತೆ ಮಾಡಲು ಅವಕಾಶ ಮಾಡಕೊಡ ಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಕೆ. ಲೋಕಾನಂದ, ಬಿ.ಜಿ. ಲೋಕೇಶ್, ಎಚ್.ಎನ್. ಹೂವಯ್ಯ, ಎನ್.ಎಂ. ಪುಟ್ಟಣ್ಣ, ರಾಜು, ಎಚ್.ಟಿ. ಗಿರಿ ಸೇರಿದಂತೆ ಇತರರು ಇದ್ದರು.