ಕೂಡಿಗೆ,ಆ. ೧೪: ಜಿಲ್ಲೆಯ ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಸಂದರ್ಭದಲ್ಲಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸಲಾಗುತ್ತದೆ. ಆದರೆ, ಅಣೆಕಟ್ಟೆಯ ಮುಂಭಾಗದಲ್ಲಿರುವ ತಳ ಹಂತದ ಸೇತುವೆಯು ಸಂಪೂರ್ಣವಾಗಿ ನೀರಿನಿಂದ ಜಲಾವೃತಗೊಳ್ಳುತ್ತದೆ ಇದರಿಂದಾಗಿ ಕುಶಾಲನಗರ - ಹಾರಂಗಿ - ಸೋಮವಾರಪೇಟೆ ಕಡೆಗೆ ಹೋಗುವ ಸಂಪರ್ಕ ಕಡಿತಗೊಂಡು ಈ ವ್ಯಾಪ್ತಿಯ ಅನೇಕ ಗ್ರಾಮಗಳ ಗ್ರಾಮಸ್ಥರು ಮತ್ತು ವಾಹನಗಳ ಸಂಚಾರಕ್ಕೆ ಬಾರಿ ತೊಂದರೆಗಳು ಆಗುತ್ತಿವೆ. ಇದಕ್ಕೆ ಸಂಬAಧಿಸಿದAತೆ ಈ ವ್ಯಾಪ್ತಿಯ ೧೦ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ೧೦ ವರ್ಷಗಳಿಂದ ಅನೇಕ ಬಾರಿ ಮನವಿಯನ್ನು ನೀರಾವರಿ ಇಲಾಖೆಯವರಿಗೆ ಸಲ್ಲಿಸಿದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಈ ಸೇತುವೆಯ ಮೇಲೆ ನೀರು ಹರಿಯಲು ಪ್ರಾರಂಭವಾದರೆ ರಸ್ತೆಯ ಸಂಪರ್ಕ ಕಡಿತಗೊಳ್ಳುವ ಹಿನ್ನೆಲೆಯಲ್ಲಿ ಹುದುಗೂರು, ಯಡವನಾಡು, ಕಾಳಿದೇವನ ಹೊಸೂರು, ಮಾವಿನಹಳ್ಳ, ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರು ಮತ್ತು ಜಾನುವಾರುಗಳು ಈ ನೀರು ತುಂಬಿದ ಸೇತುವೆಯನ್ನೇ ದಾಟಿಕೊಂಡು ಹೋಗಬೇಕಾದ ಪ್ರಸಂಗ ಇದೆ. ಈ ಮೊದಲು ಸೇತುವೆಯ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಪಕ್ಕದ ಗ್ರಾಮಗಳ ಗ್ರಾಮಸ್ಥರ ಓಡಾಟಕ್ಕೆ ಅಣೆಕಟ್ಟೆಯ ಮೇಲೆ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಸಾರ್ವಜನಿಕರ ಓಡಾಟ ತಡೆಹಿಡಿಯಲಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಸ್ಥರ ತಿರುಗಾಟಕ್ಕೆ ನೀರು ಸೇತುವೆಯ ಮೇಲೆ ಬಂದಾಗ ಐದು ಕಿಲೋಮೀಟರ್ ಅಧಿಕವಾದ ಪರ್ಯಾಯ ಮಾರ್ಗ ಬಳಸಿಕೊಂಡು ಹಾರಂಗಿ ಕಡೆಗೆ ಬರುವಂತಹ ಪ್ರಸಂಗ ಎದುರಾಗುತ್ತಿದೆ.

ಹತ್ತು ವರ್ಷಗಳಿಂದಲೂ ನೂತನ ಸೇತುವೆಯ ನಿರ್ಮಾಣದ ಭರವಸೆ ನೀಡಲಾಗುತ್ತಿದ್ದು, ಇದುವರೆಗೂ ಯಾವುದೇ ಕಾಮಗಾರಿಯ ಕ್ರಿಯಾಯೋಜನೆ ಅನುಷ್ಠಾನಗೊಂಡಿಲ್ಲ. ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾದ ನೀರನ್ನು ಹರಿಸಿದಾಗ ಕೆಳ ಮಟ್ಟದ ಸೇತುವೆಯ ಮೇಲೆ ಹರಿಯುವಾಗ ಅನೇಕ ಪ್ರವಾಸಿಗರು ಸೇತುವೆಯ ಮೇಲೆ ಆಳದ ಅರಿವು ಇಲ್ಲದೆ ನೀರಿಗೆ ಇಳಿದು ಸಾವನ್ನಪ್ಪಿದ ಘಟನೆಗಳು ವರ್ಷಂಪ್ರತಿ ನಡೆಯುತ್ತಿವೆ. ಅದರಿಂದಾಗಿ ಹಾರಂಗಿ ನೀರಾವರಿ ಇಲಾಖೆಯವರು ಅಣೆಕಟ್ಟೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಜಾಗದಲ್ಲಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ

ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ಅವರ ಸೂಚನೆಯಂತೆ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳದ ಸಂಪೂರ್ಣ ಮಾಹಿತಿ ಆಧಾರದ ಮೇಲೆ ನೂತನ ಸೇತುವೆಯ ನಿರ್ಮಾಣಕ್ಕೆ ಸಂಬAಧಿಸಿದAತೆ ಕ್ರಿಯಾ ಯೋಜನೆ ರೂ. ೨೫ ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ. -ಕೆ.ಕೆ ನಾಗರಾಜಶೆಟ್ಟಿ