ಗೋಣಿಕೊಪ್ಪಲು, ಆ.೧೪: ಸದಾ ನಾಗರಿಕರ ಅರ್ಜಿ ಸ್ವೀಕಾರ, ಅಧಿಕಾರಿಗಳೊಂದಿಗೆ ಸಭೆ, ಕಾರ್ಯಕರ್ತರ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಮ್ಮ ದೈನಂದಿನ ಒತ್ತಡವನ್ನು ಬದಿಗಿಟ್ಟು ತಾವೇ ಭತ್ತದ ಗದ್ದೆಗಿಳಿದು ನಾಟಿ ಮಾಡಿದರು.
ಅಲ್ಲದೆ ಯಾಂತೀಕೃತ ನಾಟಿ ಯಂತ್ರವನ್ನು ಚಾಲಿಸಿದರು. ಈ ಮೂಲಕ ನೆರೆದಿದ್ದ ನಾಗರಿಕರ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆದರು. ದ.ಕೊಡಗಿನ ನಲ್ಲೂರು ಗ್ರಾಮದ ಪ್ರಗತಿಪರ ರೈತ ಸೋಮೆಯಂಗಡ ಗಣೇಶ್ ತಿಮ್ಮಯ್ಯನವರ ಭತ್ತದ ಗದ್ದೆಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಇವರ ವತಿಯಿಂದ ಯಾಂತ್ರೀಕೃತ ಭತ್ತದ ನಾಟಿಯ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ಎರಡು ದಿನಗಳ ಬಿಡುವು ನೀಡಿದ್ದ ಮಳೆರಾಯ ಕಾರ್ಯಕ್ರಮ ದಿನದಂದು ಒಂದೇ ಸಮನೆ ಸುರಿದು ಗದ್ದೆಯ ಸುತ್ತಮುತ್ತಲಿನ ಪ್ರದೇಶವನ್ನು ಕೆಸರುಮಯಗೊಳಿಸಿತ್ತು. ಭತ್ತದ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಸ್ಥಳೀಯ ಪೊನ್ನಪ್ಪಸಂತೆಯ ಶಾಲಾ ವಿದ್ಯಾರ್ಥಿಗಳು ಹಾಗೂ ಸಾಯಿಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಆಗಮಿಸಿ ಕಾತುರತೆಯಿಂದ ಎದುರುನೋಡುತ್ತಿದ್ದರು.
ಸಂಜೆ ಸೂರ್ಯ ಮುಳುಗುವ ಸಮಯವಾಗುತ್ತಿದ್ದಂತೆಯೇ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಆಗಮಿಸಿ ಭತ್ತದ ಗದ್ದೆಗೆ ಇಳಿದು ನಾಟಿ ಕಾರ್ಯ ಆರಂಭಿಸಿದರು. ಇದನ್ನು ಕಂಡ ಅಧಿಕಾರಿಗಳ ತಂಡ, ವಿದ್ಯಾರ್ಥಿಗಳು ಹಾಗೂ ನಾಗರಿಕರು ಬೆರಗಾದರು.
ಭತ್ತದ ಪೈರನ್ನು ಹಿಡಿದು ನಾಟಿ ಆರಂಭಿಸಿದರು. ಇದರಿಂದ ಪ್ರೇರಣೆ ಗೊಂಡ ಕೆಲ ಶಾಲಾ ವಿದ್ಯಾರ್ಥಿನಿಯರು, ಗದ್ದೆಗಿಳಿದು ಶಾಸಕರೊಂದಿಗೆ ನಾಟಿ ಮಾಡಿ ವಿಶೇಷ ಅನುಭವ ಪಡೆದರು. ಕಾಂಗ್ರೆಸ್ ಪಕ್ಷದ ತೀತಿರ ಧರ್ಮಜ ಉತ್ತಪ್ಪ, ಬಿಜೆಪಿ ಪಕ್ಷದ ಅಳಮೇಂಗಡ ಬೋಸ್, ಪ್ರಗತಿಪರ ರೈತ ಗಣೇಶ್ ಹಾಗೂ ಇತರರು ಇವರಿಗೆ ಸಾಥ್ ನೀಡಿದರು. ಯಾಂತ್ರೀಕೃತ ನಾಟಿ ಯಂತ್ರವನ್ನು ತಾವೇ ಚಾಲನೆ ಮಾಡಿದ ಶಾಸಕ ವಿಶಾಲವಾದ ಗದ್ದೆಯ ಮೂರು ಸಾಲು ನಾಟಿ ಕಾರ್ಯ ಮಾಡಿದರು. ಸ್ಥಳದಲ್ಲಿ ಬೀಜ ಬಿತ್ತನೆ ಬಗ್ಗೆ ಮಾಹಿತಿ ಪಡೆದ ಶಾಸಕ ಪೊನ್ನಣ್ಣ, ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದರು.
ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಭತ್ತದ ಕೃಷಿ ಚಟುವಟಿಕೆ ನಿಂತುಹೋದಲ್ಲಿ ಮನುಷ್ಯನ ಬದುಕು ದುಸ್ತರವಾಗಲಿದೆ, ತಮ್ಮ ಭೂಮಿಯಲ್ಲಿ ಪ್ರತಿ ರೈತ ಭತ್ತ ಬೆಳೆಯುವ ಪ್ರಯತ್ನಕ್ಕೆ ಮುಂದಾಗಬೇಕು, ಎಷ್ಟು ದೊಡ್ಡ ಹುದ್ದೆಯನ್ನು ಹೊಂದಿದ್ದರೂ, ಹಣವನ್ನು ಗಳಿಸಿದರೂ ಭತ್ತ ಇಲ್ಲದೆ ಹೋದರೆ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕೃಷಿಗೆ ಒತ್ತು ನೀಡುವ ಪ್ರಯತ್ನಕ್ಕೆ ಮೊದಲ ಆದ್ಯತೆ ನೀಡಲಿದೆ. ಯಾಂತ್ರೀಕೃತ ನಾಟಿಯಿಂದ ಖರ್ಚು ಕಡಿಮೆ ಮಾಡಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಹೇಮ್ಲಾ ನಾಯಕ್ ಬಿ. ಮಾತನಾಡಿ ಆಧುನಿಕ ಕಾಲದಲ್ಲಿ ಯಾಂತ್ರೀಕೃತ ನಾಟಿಯಿಂದ ಖರ್ಚು ಕಡಿಮೆ ಮಾಡಿಕೊಂಡು ರೈತ ಭತ್ತ ಬೆಳೆಯಬಹುದು, ಕಾರ್ಮಿಕರ ಸಮಸ್ಯೆ ನೀಗಿಸಬಹುದು, ಇದರಿಂದಾಗಿ ಸಂಸ್ಥೆಯ ವತಿಯಿಂದ ರೈತರಲ್ಲಿ ಅರಿವು ಮೂಡಿಸುವ ಪ್ರಯತ್ನ ಇಲಾಖೆಯ ವತಿಯಿಂದ ನಡೆಯುತ್ತಿದೆ. ಇದರ ಪ್ರಯೋಜನ ಪ್ರತಿ ರೈತ ಪಡೆಯಬೇಕೆಂಬದು ಇಲಾಖೆಯ ಉದ್ದೇಶ ಎಂದರು. ಪ್ರಗತಿಪರ ರೈತ ಸೋಮೆಂಗಡ ಗಣೇಶ್ ತಿಮ್ಮಯ್ಯ ಮಾಹಿತಿ ಒದಗಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ. ದೇವಗಿರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ಆರ್.ಎನ್. ಕೆಂಚರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿಕೇರಿಯ ಸಹ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಎಸ್.ವೈ. ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ರೈತ ಪುಚ್ಚಿಮಾಡ ಲಾಲ, ಬಾಳೆಲೆಯ ಅಳಮೇಂಗಡ ಬೋಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
- ಹೆಚ್.ಕೆ.ಜಗದೀಶ್